ಹಾರ್ಮುಝ್ ಜಲಸಂಧಿಯಲ್ಲಿ ಭಾರತ, ಚೀನಾ, ಖತರ್, ಇರಾಕ್ ದೇಶಗಳ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅವಕಾಶ ನೀಡಿದ ಇರಾನ್

Photo Credit : PTI
ಟೆಹರಾನ್: ಪಶ್ಚಿಮ ಏಶ್ಯದಲ್ಲಿ ಭುಗಿಲೆದ್ದಿರುವ ಸಂಘರ್ಷದ ನಡುವೆಯೂ ಆಯಕಟ್ಟಿನ ಹಾರ್ಮುಝ್ ಜಲಸಂಧಿಯಲ್ಲಿ ಭಾರತ, ಚೀನಾ, ಇರಾಕ್ ಹಾಗೂ ಖತರ್ ದೇಶಗಳ ವಾಣಿಜ್ಯ ಹಡಗುಗಳ ಸಂಚಾರಕ್ಕೆ ವಿನಾಯಿತಿ ನೀಡಿರುವುದಾಗಿ ವರದಿಯಾಗಿದೆ.
ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವು ಧೂಳೀಪಟಗೊಂಡ ಬೆನ್ನಲ್ಲೇ ಇರಾನ್ ಈ ನಿರ್ಧಾರವನ್ನು ಪ್ರಕಟಿಸಿದೆ. ಈ ನಾಲ್ಕೂ ರಾಷ್ಟ್ರಗಳ ಜೊತೆಗಿನ ಪರಸ್ಪರ ಹಿತಾಸಕ್ತಿಯನ್ನು ಆಧರಿಸಿ ಟೆಹರಾನ್ ಈ ಕ್ರಮವನ್ನು ಕೈಗೊಂಡಿದೆ ಎಂದು ಇರಾನ್ ಸಂಸತ್ನ ರಾಷ್ಟ್ರೀಯ ಭದ್ರತಾ ಹಾಗೂ ವಿದೇಶಾಂಗ ನೀತಿ ಸಮಿತಿಯ ಉಪಾಧ್ಯಕ್ಷ ಅಮೀರ್ ಹಯಾತ್ ಮೊಕದ್ದಮ್ ತಿಳಿಸಿದ್ದಾರೆ. ಇದರಿಂದಾಗಿ ಇರಾನ್ಗೆ ಭಾರತದಿಂದ ಔಷಧ ವಸ್ತುಗಳ ಆಮದು ಮಾಡಿಕೊಳ್ಳಲು ಅವಕಾಶ ದೊರೆಯಲಿದೆ. ಇದೇ ವೇಳೆ ಬೀಜಿಂಗ್ನಿಂದ ರಾಜಕೀಯ ಬೆಂಬಲವನ್ನು ಪಡೆಯುವುದಕ್ಕೋಸ್ಕರ ಚೀನಿ ನೌಕೆಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ನಾಲ್ಕು ದೇಶಗಳ ಹಡಗುಗಳು ಹಾರ್ಮುಝ್ ಜಲಸಂಧಿಯನ್ನು ಮುಕ್ತವಾಗಿ ಹಾದುಹೋಗಬಹುದು ಹಾಗೂ ಅವುಗಳನ್ನು ಅಮೆರಿಕ ಕೂಡಾ ತಡೆಯಕೂಡದು’’ ಎಂದು ಅಮೀರ್ ಹಯಾತ್ ಹೇಳಿದ್ದಾರೆ.
ಇಂಧನ ಪೂರೈಕೆಗಾಗಿ ಮಧ್ಯಪ್ರಾಚ್ಯವನ್ನು ಅವಲಂಭಿಸಿರುವ ಭಾರತಕ್ಕೆ ಹಾಗೂ ಅದು ಈ ಪ್ರದೇಶದಲ್ಲಿ ವ್ಯಾಪಕವಾದ ವಾಣಿಜ್ಯ ಹಿತಾಸಕ್ತಿಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಇರಾನ್ ನೀಡಿರುವ ಈ ರಿಯಾಯಿತಿ ಮಹತ್ವದ್ದಾಗಿದೆ. ಆದಾಗ್ಯೂ, ಈ ವಿನಾಯಿತಿಯು ಸಂಪೂರ್ಣ ಉಚಿತವಾಗಿರದೆ, ಜಲಸಂಧಿಯನ್ನು ದಾಟುವ ಹಡಗುಗಳು ಸಾರಿಗೆ ಶುಲ್ಕವನ್ನು ಭರಿಸಬೇಕಾಗುತ್ತದೆ ಎಂದು ಇರಾನ್ನ ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಚೀನಾಗೆ ನೀಡಿರುವ ರಿಯಾಯಿತಿಯು ಇರಾನ್ನ ವ್ಯೂಹಾತ್ಮಕ ಕಾರ್ಯತಂತ್ರದ ಭಾಗವಾಗಿದೆ. ಚೀನಾವು ಇರಾನ್ನ ಪ್ರಮುಖ ತೈಲ ಗ್ರಾಹಕನಾಗಿದೆ ಹಾಗೂ ಬಿಕ್ಕಟ್ಟಿನ ಸಂದರ್ಭ ಇರಾನ್ ನಾಯಕತ್ವಕ್ಕೆ ಆರ್ಥಿಕ ಹಾಗೂ ರಾಜತಾಂತ್ರಿಕ ಬೆಂಬಲವನ್ನು ನೀಡುತ್ತಿದೆ.
ಖತರ್ ಹಾಗೂ ಇರಾಕ್ ಆಯಕಟ್ಟಿನ ದೃಷ್ಟಿಯಿಂದ ಇರಾನ್ಗೆ ಮಹತ್ವದ್ದಾಗಿವೆ. ಖತರ್ ಜಗತ್ತಿನ ಅತ್ಯಂತ ಪ್ರಮುಖ ಎಲ್ಎನ್ಐ ರಫ್ತುದಾರ ದೇಶಗಳಲ್ಲೊಂದಾಗಿದ್ದು, ಕೊಲ್ಲಿ ಪ್ರದೇಶದ ಹಡಗುಮಾರ್ಗಗಳು ಕಾರ್ಯನಿರ್ವಹಿಸುವಲ್ಲಿ ನಿರ್ಣಾಯಕವಾಗಿದೆ. ಇದೇ ವೇಳೆ ಇರಾಕ್ ದೇಶದ ಭದ್ರತೆ ಹಾಗೂ ಸ್ಥಿರತೆ, ತನ್ನದೇ ಹಿತಾಸಕ್ತಿಯ ಭಾಗವೆಂದು ಪರಿಗಣಿಸಿ ಇರಾನ್ ಈ ಸಡಿಲಿಕೆಯನ್ನು ಮಾಡಿದೆ.
ಜಾಗತಿಕ ಇಂಧನ ಪೂರೈಕೆಯ ಶೇ.20ರಷ್ಟು ಪಾಲು ಹಾರ್ಮುಝ್ ಜಲಸಂಧಿಯ ಮೂಲಕವೇ ಸಾಗುವುದರಿಂದ ಈ ಬೆಳವಣಿಗೆ ಜಾಗತಿಕ ಮಾರುಕಟ್ಟೆಯಲ್ಲಿ ತುಸು ನಿರಾಳವನ್ನುಂಟು ಮಾಡಿದೆ. ಫೆಬ್ರವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ದಾಳಿಗಳು ಹಾಗೂ ಇರಾನ್ನ ಪ್ರತಿದಾಳಿಯ ಬಳಿಕ ಹಾರ್ಮುಝ್ ಜಲಸಂಧಿಯಲ್ಲಿ ಹಡಗು, ನೌಕೆಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.






