ಅಮೆರಿಕ ದಾಳಿಯ ಬಳಿಕ ಹಾರ್ಮುಝ್ ಜಲಸಂಧಿಯಲ್ಲಿ ಹಡಗು ಸಂಚಾರ ಬಹುತೇಕ ಸ್ಥಗಿತ; ವರದಿ

ಸಾಂದರ್ಭಿಕ ಚಿತ್ರ (AI)
ದುಬೈ: ಇರಾನ್ ವಿರುದ್ಧ ಅಮೆರಿಕ ಸತತ ಎರಡನೇ ದಿನವೂ ನಡೆಸಿದ ದಾಳಿಗಳ ಬೆನ್ನಲ್ಲೇ ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ಸಮುದ್ರ ಸಂಚಾರ ಬಹುತೇಕ ಸ್ಥಗಿತಗೊಂಡಿದೆ ಎಂದು ಬ್ಲೂಮ್ಬರ್ಗ್ ನ್ಯೂಸ್ ವರದಿ ಮಾಡಿದೆ.
ಹಡಗುಗಳ ಸಂಚಾರದ ಮಾಹಿತಿ ಶಿಪ್ ಟ್ರ್ಯಾಕಿಂಗ್ ಡೇಟಾ ಉಲ್ಲೇಖಿಸಿರುವ ವರದಿ ಪ್ರಕಾರ, ಕೊಲ್ಲಿಯಿಂದ ಹೊರಹೋಗುತ್ತಿರುವ ದೊಡ್ಡ ಹಡಗುಗಳಲ್ಲಿ ಇರಾನ್ ಧ್ವಜ ಹೊಂದಿರುವ ಒಂದು ಕಂಟೇನರ್ ಹಡಗು ಹಾಗೂ ಅಮೆರಿಕದ ನಿರ್ಬಂಧಗಳಿಂದ ವಿನಾಯಿತಿ ಪಡೆದಿರುವ ಒಂದು ಸೂಪರ್ಟ್ಯಾಂಕರ್ ಮಾತ್ರ ಸಂಚರಿಸುತ್ತಿರುವುದು ಕಂಡುಬಂದಿದೆ.
ಬುಧವಾರ ಎರಡೂ ದಿಕ್ಕುಗಳಲ್ಲಿ ಒಟ್ಟು 14 ಸರಕು ಹಡಗುಗಳು ಹಾರ್ಮುಝ್ ಜಲಸಂಧಿಯನ್ನು ದಾಟಿವೆ. ಜೂನ್ 16ರಂದು ಅಮೆರಿಕ–ಇರಾನ್ ಮಧ್ಯಂತರ ಒಪ್ಪಂದಕ್ಕೆ ಬಂದ ಬಳಿಕ ದಾಖಲಾಗಿರುವ ಅತ್ಯಂತ ಕಡಿಮೆ ಹಡಗು ಸಂಚಾರ ಇದಾಗಿದೆ ಎಂದು ವರದಿ ಹೇಳಿದೆ.
ಅಮೆರಿಕ ಮತ್ತು ಇರಾನ್ ಮಧ್ಯಂತರ ಒಪ್ಪಂದಕ್ಕೆ ಒಪ್ಪಿದ ನಂತರದ ಮೂರು ವಾರಗಳ ಅವಧಿಯಲ್ಲಿ ಪ್ರತಿದಿನ ಸರಾಸರಿ 34 ಹಡಗುಗಳು ಹಾರ್ಮುಝ್ ಜಲಸಂಧಿಯನ್ನು ದಾಟಿದ್ದವು ಎಂದು ವರದಿ ಉಲ್ಲೇಖಿಸಿದೆ.




