ರೈಲು ಢಿಕ್ಕಿ: ನ್ಯೂಯಾರ್ಕ್ ಸಿಟಿ ಸಬ್ವೇ ಹಳಿಯ ಮೇಲೆ ಕುಳಿತಿದ್ದ ಭಾರತೀಯ ಮೂಲದ ಇಬ್ಬರು ಮೃತ್ಯು

Photo: x.com/GlLakshy
ನ್ಯೂಯಾರ್ಕ್: ನ್ಯೂಯಾರ್ಕ್ ಸಿಟಿ ಸಬ್ವೇ ಹಳಿಯ ಮೇಲೆ ಕುಳಿತಿದ್ದ ಭಾರತೀಯ ಮೂಲದ ಇಬ್ಬರು ರೈಲು ಡಿಕ್ಕಿಗೆ ಸಿಲುಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ನ್ಯೂಯಾರ್ಕ್ನ ಮ್ಯಾನ್ಹ್ಯಾಟನ್ ನಿಲ್ದಾಣದಲ್ಲಿ ನಡೆದಿದೆ.
ಮೃತರನ್ನು ಮಲೈಕಾ ಚಿತ್ರೆ ಮತ್ತು ನವಮ್ ಕೌಲ್ ಎಂದು ಗುರುತಿಸಲಾಗಿದ್ದು, ಇಬ್ಬರಿಗೂ 24 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.
ಡೌನ್ಟೌನ್ ಮ್ಯಾನ್ಹ್ಯಾಟನ್ನ ಸ್ಪ್ರಿಂಗ್ ಸ್ಟ್ರೀಟ್ ನಿಲ್ದಾಣದಲ್ಲಿ ನಂ. 4 ರೈಲು ಸಮೀಪಿಸುತ್ತಿದ್ದಾಗ ಇಬ್ಬರೂ ಹಳಿಯ ಮೇಲೆ ಕುಳಿತಿದ್ದರು ಎಂದು ನ್ಯೂಯಾರ್ಕ್ ಡೈಲಿ ನ್ಯೂಸ್ ವರದಿ ಮಾಡಿದೆ.
ರೈಲು ಚಾಲಕಿಯು ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದು, ಆ ಜೋಡಿಯು ಹಳಿಯ ಮೇಲೆ ಕುಳಿತಿರುವುದನ್ನು ತಾನು ನೋಡಿದ್ದೆ ಮತ್ತು ರೈಲನ್ನು ನಿಲ್ಲಿಸಲು ಪ್ರಯತ್ನಿಸಿದ್ದೆ ಎಂದು ಹೇಳಿದ್ದಾರೆ. ರೈಲು ಡಿಕ್ಕಿ ಹೊಡೆಯುವ ವೇಳೆ ಮಹಿಳೆ ನಗುತ್ತಿರುವಂತೆ ಹಾಗೂ ಆ ವ್ಯಕ್ತಿಯನ್ನು ತನ್ನತ್ತ ಎಳೆದುಕೊಳ್ಳುತ್ತಿರುವಂತೆ ಕಂಡುಬಂದಿತ್ತು ಎಂದು ಚಾಲಕಿ ಹೇಳಿರುವುದಾಗಿ ವರದಿ ತಿಳಿಸಿದೆ.
ಕೌಲ್ ಅವರು ಹಳಿಯ ಮೇಲೆ ಬಿದ್ದಿದ್ದಾರೋ ಅಥವಾ ತಾವೇ ಕೆಳಗೆ ಇಳಿದಿದ್ದಾರೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಆದರೆ ಚಿತ್ರೆ ಅವರು ಕೌಲ್ ಅವರನ್ನು ತಮ್ಮತ್ತ ಎಳೆದುಕೊಳ್ಳಲು ಪ್ರಯತ್ನಿಸುತ್ತಿರುವಂತೆ ಕಂಡುಬಂದಿತ್ತು ಎಂದು ಪೊಲೀಸ್ ಮೂಲಗಳು ನ್ಯೂಯಾರ್ಕ್ ಪೋಸ್ಟ್ಗೆ ತಿಳಿಸಿವೆ.
ಡಿಕ್ಕಿ ಸಂಭವಿಸುವ ಸ್ವಲ್ಪ ಮೊದಲು ಆ ಜೋಡಿಯು ಹಳಿಯ ಮೇಲೆ ಕುಳಿತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊ ತೋರಿಸಿದೆ. ರೈಲು ಚಾಲಕಿಯು ತುರ್ತು ಬ್ರೇಕ್ ಹಾಕಿದರೂ ಸಮಯಕ್ಕೆ ಸರಿಯಾಗಿ ರೈಲನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಆಮ್ನ್ಯೂಯಾರ್ಕ್ ವರದಿ ಮಾಡಿದೆ.
ತುರ್ತು ಸಿಬ್ಬಂದಿ ಇಬ್ಬರನ್ನೂ ರೈಲಿನ ಅಡಿಯಲ್ಲಿ ಪತ್ತೆಹಚ್ಚಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಘಟನೆಯ ಬಳಿಕ ರೈಲಿನಲ್ಲಿದ್ದ ಸುಮಾರು 100 ಪ್ರಯಾಣಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಯಿತು ಎಂದು ಡೈಲಿ ನ್ಯೂಸ್ ವರದಿ ಮಾಡಿದೆ.
ಸಮೀಪಿಸುತ್ತಿದ್ದ ರೈಲಿನಿಂದ ತಮಗೆ ಅಪಾಯವಿದೆ ಎಂಬುದನ್ನು ಅರಿಯದಷ್ಟು ಆ ಜೋಡಿ ತೀವ್ರ ನಶೆಯಲ್ಲಿದ್ದರೇ ಎಂಬ ಬಗ್ಗೆಯೂ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಆದರೆ, ಆತ್ಮಹತ್ಯೆಯ ಸಾಧ್ಯತೆಯನ್ನು ತನಿಖಾಧಿಕಾರಿಗಳು ಸಂಪೂರ್ಣವಾಗಿ ತಳ್ಳಿಹಾಕಿಲ್ಲ ಎಂದು ವರದಿ ತಿಳಿಸಿದೆ.
ಅವರ LinkedIn ಪ್ರೊಫೈಲ್ಗಳ ಪ್ರಕಾರ, ಇಬ್ಬರೂ ದೀರ್ಘಕಾಲದ ಸ್ನೇಹಿತರಾಗಿದ್ದು, 2024ರಲ್ಲಿ ನ್ಯೂಜೆರ್ಸಿಯ ರಟ್ಜರ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದರು. ನ್ಯೂಯಾರ್ಕ್ ಪೊಲೀಸ್ ಇಲಾಖೆ ಈ ಕುರಿತು ತಕ್ಷಣಕ್ಕೆ ಹೆಚ್ಚಿನ ಮಾಹಿತಿ ನೀಡಿರುವುದಿಲ್ಲ.






