ರೈಲು ಹೈಜಾಕ್ ಪ್ರಕರಣ | ಪಾಕ್ ಸೇನೆಯಿಂದ ಮುಂದುವರಿದ ಕಾರ್ಯಾಚರಣೆ
►155 ಒತ್ತೆಯಾಳುಗಳ ರಕ್ಷಣೆ, 27 ಉಗ್ರರ ಹತ್ಯೆ ►ರೈಲಿನಲ್ಲಿ ಇನ್ನೂ 185 ಪ್ರಯಾಣಿಕರು

PC : NDTV
ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ ಮಂಗಳವಾರ ಪ್ರಯಾಣಿಕ ರೈಲನ್ನು ವಶಕ್ಕೆ ತೆಗೆದುಕೊಂಡು 200ಕ್ಕೂ ಅಧಿಕ ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿರಿಸಿರುವ ಉಗ್ರರೊಂದಿಗೆ ಪಾಕಿಸ್ತಾನ ಸೇನೆಯು ಬುಧವಾರ ಕಾರ್ಯಾಚರಣೆಯನ್ನು ಮುಂದುವರಿಸಿದೆ.
ಬುಧವಾರ ಬೆಳಗ್ಗಿನ ಹೊತ್ತಿಗೆ ರೈಲಿನಲ್ಲಿದ್ದ 155 ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ ಹಾಗೂ 27 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಪಾಕ್ ಭದ್ರತಾಪಡೆಯ ಮೂಲಗಳು ತಿಳಿಸಿವೆ. ರೈಲಿನಲ್ಲಿ 100ಕ್ಕೂ ಅಧಿಕ ಸಶಸ್ತ್ರ ಉಗ್ರರಿದ್ದಾರೆಂದು ಬಂಧಮುಕ್ತಗೊಂಡ ಪ್ರಯಾಣಿಕ ಮುಹಮ್ಮದ್ ಅಶ್ರಫ್ ತಿಳಿಸಿದ್ದಾರೆ.
ಪ್ರತ್ಯೇಕ ಬಲೂಚಿಸ್ತಾನ ರಾಷ್ಟ್ರದ ಸ್ಥಾಪನೆಗಾಗಿ ಸಶಸ್ತ್ರ ಹೋರಾಟ ನಡೆಸುತ್ತಿರುವ ಬಲೂಚ್ ವಿಮೋಚನಾ ಸೇನೆ (ಬಿಎಲ್ಎ) ಈ ದಾಳಿಯ ಹೊಣೆ ವಹಿಸಿಕೊಂಡಿದೆ.
ಕನಿಷ್ಠ 10 ನಾಗರಿಕರು ಹಾಗೂ 30ಕ್ಕೂ ಅಧಿಕ ಪಾಕ್ ಯೋಧರು, ಬಿಎಲ್ಎ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಗಾಯಗೊಂಡ ಹಲವಾರು ಒತ್ತೆಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಒತ್ತೆಸೆರೆಯಲ್ಲಿರುವ 185ಕ್ಕೂ ಅಧಿಕ ಪ್ರಯಾಣಿಕರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪಾಕ್ ಸೇನಾ ಮೂಲಗಳು ತಿಳಿಸಿವೆ.
ಬಲೂಚ್ ವಿಮೋಚನಾ ಸೇನೆ (ಬಿಎಲ್ಎ)ಯ ಉಗ್ರರು ರೈಲನ್ನು ನಿಲ್ಲಿಸಿರುವ ಬೋಲನ್ ಜಿಲ್ಲೆಯ ದುರ್ಗಮ ಪರ್ವತಾಚ್ಚಾದಿತ ಪ್ರಾಂತಕ್ಕೆ ಹೆಲಿಕಾಪ್ಟರ್ಗಳ ಮೂಲಕ ನೂರಾರು ಸೈನಿಕರು ಹಾಗೂ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ. ಆದರೂ ಉಗ್ರರ ಒತ್ತೆಸೆರೆಯಲ್ಲಿ ಇನ್ನೂ ಎಷ್ಟು ಮಂದಿ ಪ್ರಯಾಣಿಕರಿದ್ದಾರೆಂಬ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಲಾಗಿಲ್ಲ.
ಈ ದಾಳಿಯ ಹೊಣೆ ವಹಿಸಿಕೊಂಡಿರುವ ಬಂಡುಕೋರ ಸಂಘಟನೆಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಮಂಗಳವಾರ ತಾನು 214 ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿರಿಸಿರುವುದಾಗಿ ಹೇಳಿಕೊಂಡಿತ್ತು. ಉಗ್ರರ ದಾಳಿಯಲ್ಲಿ ರೈಲಿನ ಲೋಕೊ ಪೈಲಟ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಬಲೂಚ್ನ ರಾಜಕೀಯ ಕೈದಿಗಳನ್ನು , ಹೋರಾಟಗಾರರನ್ನು ಹಾಗೂ ಸೇನೆಯು ಅಪಹರಿಸಿದ ವ್ಯಕ್ತಿಗಳನ್ನು ಬಿಡುಗಡೆಗೊಳಿಸಬೇಕೆಂಬ ತನ್ನ ಬೇಡಿಕೆಗೆಯನ್ನು ಈಡೇರಿಸಲು ಬಿಎಲ್ಎ ಉಗ್ರರು 48 ತಾಸುಗಳ ಗಡುವು ವಿಧಿಸಿದ್ದು, ತಪ್ಪಿದಲ್ಲಿ ಒತ್ತೆಯಾಳುಗಳನ್ನು ಕೊಲ್ಲಲಾರಂಭಿಸುವುದಾಗಿ ಎಚ್ಚರಿಕೆ ನೀಡಿದೆ.
450ಕ್ಕೂ ಅಧಿಕ ಪ್ರಯಾಣಿಕರಿದ್ದ 9 ಬೋಗಿಗಳನ್ನೊಳಗೊಂಡ ಜಾಫರ್ ಎಕ್ಸ್ಪ್ರೆಸ್ ರೈಲು ಬಲೂಚಿಸ್ತಾನ ಪ್ರಾಂತದ ಕ್ವೆಟ್ಟಾದಿಂದ ಖೈಬರ್ ಪಖ್ತೂನ್ಖ್ವಾದ ಪೇಶಾವರ್ಗೆ ಪ್ರಯಾಣಿಸುತ್ತಿದ್ದಾಗ, ಬೋಲನ್ ಜಿಲ್ಲೆಯ ನಿರ್ಜನ ಪ್ರದೇಶವಾದ ಮುಷ್ಕಾಫ್ನಲ್ಲಿ ಬಿಎಲ್ಎ ಬಂಡುಕೋರರು ದಾಳಿ ನಡೆಸಿದ್ದಾರೆ. ರೈಲು ಹಳಿಗಳನ್ನು ಸ್ಫೋಟಿಸುವ ಮೂಲಕ ರೈಲು ನಿಲ್ಲುವಂತೆ ಮಾಡಿದ ಬಂಡುಕೋರರು ಅದನ್ನೇರಿ 425 ಪ್ರಯಾಣಿಕರನ್ನು ಒತ್ತೆಸೆರೆಯಿರಿಸಿದ್ದರು.
ದಾಳಿಯ ಹೊಣೆಹೊತ್ತುಕೊಂಡಿರುವ ಬಲೂಚ್ ವಿಮೋಚನಾ ಸೇನೆಯ ವಕ್ತಾರ ಜೀಯಾಂದ್ ಬಲೋಚ್ ಅವರು ಬುಧವಾರ ಹೇಳಿಕೆಯೊಂದನ್ನು ನೀಡಿ, ಒಂದು ವೇಳೆ ಪಾಕ್ ಅಧಿಕಾರಿಗಳು, ಸೇನೆಯಿಂದ ಅಪಹರಿಸಲ್ಪಟ್ಟ ಬಲೂಚ್ನ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಲ್ಲಿ ತನ್ನ ಗಂಪು ಒತ್ತೆಯಾಳುಗಳ ಬಿಡುಗಡೆಗೆ ಸಿದ್ಧವಿದೆಯೆಂದು ಹೇಳಿದೆ.