ಸ್ಪೇನ್ ನಲ್ಲಿ ರೈಲುಗಳು ಮುಖಾಮುಖಿ ಢಿಕ್ಕಿ; 21 ಮಂದಿ ಮೃತ್ಯು

PC: x.com/Independent/CNNnews18
ಸ್ಪೇನ್: ಸ್ಪೇನ್ ನ ದಕ್ಷಿಣ ಭಾಗದ ಅಂದಲೂಸಿಯಾ ಪ್ರದೇಶದಲ್ಲಿ ಎರಡು ಹೈಸ್ಪೀಡ್ ರೈಲುಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ 21 ಮಂದಿ ಸಾವನ್ನಪ್ಪಿ, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ವರದಿಯಾಗಿದೆ. ಈ ದುರಂತದ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ, "ಇದು ಅತೀವ ನೋವಿನ ರಾತ್ರಿ” ಎಂದಿದ್ದಾರೆ.
ಮಲಾಗಾದಿಂದ ಮ್ಯಾಡ್ರಿಡ್ ಗೆ ತೆರಳುತ್ತಿದ್ದ ಹೈಸ್ಪೀಡ್ ರೈಲು ಅಡಮುಝ್ ಬಳಿ ಹಳಿ ತಪ್ಪಿದೆ. ಹಳಿ ತಪ್ಪಿದ ರೈಲು ಮತ್ತೊಂದು ಹಳಿಗೆ ನುಗ್ಗಿದ ಪರಿಣಾಮ, ಆ ಹಳಿಯಲ್ಲಿ ಬರುತ್ತಿದ್ದ ಇನ್ನೊಂದು ರೈಲಿಗೆ ಢಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ ಎರಡನೇ ರೈಲೂ ಸಹ ಹಳಿ ತಪ್ಪಿದೆ ಎಂದು ಸ್ಪೇನ್ ನ ಅಡಿಫ್ (Adif) ರೈಲು ಜಾಲ ಸಂಸ್ಥೆ ತನ್ನ ಎಕ್ಸ್ (X) ಖಾತೆಯಲ್ಲಿ ತಿಳಿಸಿದೆ.
ದುರಂತದಲ್ಲಿ 21 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವಕ್ತಾರರು ಎಎಫ್ ಪಿಗೆ ತಿಳಿಸಿದ್ದಾರೆ. ಅಂದಲೂಸಿಯಾ ತುರ್ತು ಸೇವೆಗಳ ಮುಖ್ಯಸ್ಥ ಅಂಟೋನಿಯೊ ಸಾಂಝ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನಿಷ್ಠ 73 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. “ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ನಮ್ಮ ಮುಂದಿರುವುದು ಅತ್ಯಂತ ಸಂಕೀರ್ಣವಾದ ರಾತ್ರಿ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ಸಚಿವ ಆಸ್ಕರ್ ಪುವೆಂಟೆ ಪತ್ರಕರ್ತರಿಗೆ ಮಾಹಿತಿ ನೀಡುತ್ತಾ, ಗಂಭೀರ ಸ್ಥಿತಿಯಲ್ಲಿದ್ದ 30 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಗಾಯಗೊಂಡ ಎಲ್ಲರನ್ನೂ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.







