ಇರಾನ್ನಿಂದ ಪರ್ವತದಾಳಕ್ಕೆ ಯುರೇನಿಯಂ ಸೆಂಟ್ರಿಫ್ಯೂಜ್ಗಳ ಸಾಗಣೆ

Photo Credit : AP
ವಾಶಿಂಗ್ಟನ್,ಜು.21: ಇರಾನ್ ಜೂನ್ನಲ್ಲಿ ಸಾವಿರಾರು ಯುರೇನಿಯಂ ಸಂವರ್ಧನೆಗೊಳಿಸುವ ಸೆಂಟ್ರಿಫ್ಯೂಜ್ಗಳನ್ನು ಪಿಕ್ಆ್ಯಕ್ಸ್ ಪರ್ವತದಾಳಕ್ಕೆ ಸಾಗಿಸಿದ್ದು, ಇರಾನ್ ಅಣ್ವಸ್ತ್ರಕಾರ್ಯಕ್ರಮವನ್ನು ಪುನರ್ನಿರ್ಮಿಸುವ ಸಾದ್ಯತೆಯಿದೆಯೆಂದು ಇರಾನ್ನ ಬೇಹುಗಾರಿಕಾ ಏಜೆನ್ಸಿಗಳು ಭಾವಿಸಿವೆಯೆಂದು ಇಸ್ರೇಲ್ ಹಾಗೂ ಅಮೆರಿಕನ್ ಅಧಿಕರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಈ ಬೇಹುಗಾರಿಕಾ ಮಾಹಿತಿಯನ್ನು ಇಸ್ರೇಲ್ ಅಮೆರಿಕದ ಜೊತೆ ಹಂಚಿಕೊಂಡಿದೆ. ಕಳೆದ ವರ್ಷದ ಜೂನ್ನಲ್ಲಿ ನಡೆದ 12 ದಿನಗಳ ಇಸ್ರೇಲ್-ಇರಾನ್ ಸಂಘರ್ಷದ ಬಳಿಕ ಈ ಸೆಂಟ್ರಿಫ್ಯೂಜ್ಗಳನ್ನು ಬಿಗುಭದ್ರತೆಯ ಪಿಕ್ಆ್ಯಕ್ಸ್ ಪರ್ವತಲ್ಲಿನ ಸುರಂಗ ಮಾಳಿಗೆಗೆ ಸಾಗಿಸಲಾಗಿದೆ. ಈ ಸಂಘರ್ಷದಲ್ಲಿ ಅಮೆರಿಕ- ಇಸ್ರೇಲ್ ಪಡೆಗಳು ಇರಾನ್ನ ಪ್ರಮುಖ ಅಣುಸ್ಥಾವರಗಳನ್ನು ಗುರಿಯಾಗಿಸಿಕೊಂಡಿದ್ದವು.
ಈ ಭೂಗತ ಸ್ಥಾವರದ ಮೇಲೆ ದಾಳಿ ನಡೆಸಲು ವಾಶಿಂಗ್ಟನ್ ಸನ್ನದ್ಧವಾಗಿದೆ. ನಾವು ಪಿಕ್ಆ್ಯಕ್ಸ್ ಪರ್ವತವನ್ನು ವಶಪಡಿಸಿಕೊಳ್ಳಲಿದ್ದೇವೆ. ಇದಕ್ಕೆ ಸಿದ್ಧರಾಗಿರುವಂತೆ ಇರಾನಿಯನ್ನರಿಗೆ ತಿಳಿಸಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹ್ಯೂಗ್ ಹೆವಿಟ್ ಶೋ ಟಿವಿ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘‘ನಾವು ಪಿಕ್ಆ್ಯಕ್ಸ್ ಪರ್ವತವನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಅಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದಿಲ್ಲ. ಆದರೆ ಶೀಘ್ರದಲ್ಲೇ ನಾವು ಪಿಕ್ಆ್ಯಕ್ಸ್ಗೆ ಭಾರೀ ದೊಡ್ಡ ಹೊಡೆತ ನೀಡಲಿದ್ದೇವೆ" ಎಂದು ತಿಳಿಸಿದರು.
ಪಿಕ್ಆ್ಯಕ್ ಪರ್ವತವು ತನ್ನ ಸಂಭಾವ್ಯ ದಾಳಿಯ ಗುರಿಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಹಿರಂಗವಾಗಿ ಗುರುತಿಸಿರುವುದು ಇದೇ ಮೊದಲ ಸಲವಾಗಿದೆ. ಈ ಹಿಂದೆ ಅವರು, ಇರಾನ್ ಭೂಗತ ಗ್ರಾನೈಟ್ ಬಂಕರೊಂದರಲ್ಲಿ ಅಣ್ವಸ್ತ್ರ ಕಾರ್ಯಕ್ರಮವನ್ನು ನಡೆಸುತ್ತಿದೆಯೆಂದಷ್ಟೇ ಹೇಳಿದ್ದರು.






