ನ.19ರಂದು ಟ್ರಂಪ್, ಪುಟಿನ್, ಕ್ಸಿ ನಡುವೆ ತ್ರಿಪಕ್ಷೀಯ ಮಾತುಕತೆ? ಪರಮಾಣು ನಿಶಸ್ತ್ರೀಕರಣ, ಮಧ್ಯಪ್ರಾಚ್ಯ ಸಂಘರ್ಷದ ಬಗ್ಗೆ ಚರ್ಚೆ ಸಾಧ್ಯತೆ

ಡೊನಾಲ್ಡ್ ಟ್ರಂಪ್ , ವ್ಲಾದಿಮಿರ್ ಪುಟಿನ್ , ಕ್ಸಿ ಜಿನ್ ಪಿಂಗ್ | Photo Credit : X
ಮಾಸ್ಕೋ, ನ.15: ಜಾಗತಿಕ ರಾಜಕಾರಣದಲ್ಲಿ ನಿರ್ಣಾಯಕ ತಿರುವು ನೀಡಬಲ್ಲಂತಹ ಬೆಳವಣಿಗೆಯೊಂದರಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ಮುಂದಿನ ವಾರ ಐತಿಹಾಸಿಕ ತ್ರಿಪಕ್ಷೀಯ ಮಾತುಕತೆ ನಡೆಯಲಿದೆ. ಈ ಮೂರು ಸೂಪರ್ ಪವರ್ ದೇಶಗಳ ನಾಯಕರು ಗುರುವಾರ, ನ. 19ರಂದು ಚೀನಾದ ಶೆನ್ಝೆನ್ನಲ್ಲಿ ನಡೆಯಲಿರುವ ಏಶ್ಯಾ-ಪೆಸಿಫಿಕ್ ಸಹಕಾರ ಶೃಂಗಸಭೆ (ಅಪೆಕ್)ಯ ಸಂದರ್ಭದಲ್ಲಿ ಮಾತುಕತೆ ನಡೆಸಲಿದ್ದಾರೆ. ಶೃಂಗಸಭೆಯಲ್ಲಿ ಪುಟಿನ್ ಅವರ ಪಾಲ್ಗೊಳ್ಳುವಿಕೆಯನ್ನು ರಶ್ಯವು ಶನಿವಾರವೇ ದೃಢಪಡಿಸಿದೆ.
ಈ ಮೂರು ರಾಷ್ಟ್ರಗಳ ವರಿಷ್ಠರ ನಡುವೆ ನಡೆಯಲಿರುವ ಮೊದಲ ತ್ರಿಪಕ್ಷೀಯ ಮಾತುಕತೆ ಇದಾಗಿದೆ. ಜಾಗತಿಕ ಪರಮಾಣು ನಿಶಸ್ತ್ರೀಕರಣ ಹಾಗೂ ಮಧ್ಯಪ್ರಾಚ್ಯ ಸಂಘರ್ಷದ ಕುರಿತು ಈ ನಾಯಕರು ಚರ್ಚಿಸಲಿದ್ದಾರೆಂದು ಶ್ವೇತಭವನದ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ. ಆದರೆ, ರಶ್ಯ-ಉಕ್ರೇನ್ ಸಂಘರ್ಷದ ಬಗ್ಗೆ ಶೃಂಗಸಭೆಯಲ್ಲಿ ಚರ್ಚಿಸಲಾಗುವುದಿಲ್ಲವೆಂದು ಶ್ವೇತಭವನವು ಈಗಾಗಲೇ ಸ್ಪಷ್ಟಪಡಿಸಿದೆ. ಅಮೆರಿಕ ಹಾಗೂ ರಶ್ಯ ಈಗಾಗಲೇ ಈ ಮಾತುಕತೆಯಲ್ಲಿ ಪಾಲ್ಗೊಳ್ಳುವುದನ್ನು ದೃಢಪಡಿಸಿವೆಯಾದರೂ, ಆತಿಥೇಯ ರಾಷ್ಟ್ರವಾದ ಚೀನಾವು ಅಧಿಕೃತವಾಗಿ ದೃಢಪಡಿಸಿಲ್ಲ.






