ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ: ಭಾರತಕ್ಕೆ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಬೆಂಬಲ

photo Credit: PTI
ಪೋರ್ಟ್ ಆಫ್ ಸ್ಪೇನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕೆ ಭಾರತದ ಉಮೇದುವಾರಿಕೆಗೆ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಸಂಪೂರ್ಣ ಬೆಂಬಲ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಪ್ರಧಾನಿ ಕಮ್ಲಾ ಪರ್ಸಡ್-ಬಿಸ್ಸೆಸ್ಸಾರ್ ನಡುವೆ ನಡೆದ ಸಭೆಯ ಬಳಿಕ ಮೂಲಸೌಕರ್ಯ ಮತ್ತು ಔಷಧ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಭಾರತ ಹಾಗೂ ಟ್ರಿನಿಡಾಡ್ ಮತ್ತು ಟೊಬ್ಯಾಗೋ ದೇಶ 6 ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿವೆ. ರಕ್ಷಣೆ, ಕೃಷಿ, ಆರೋಗ್ಯ ಸೇವೆ ಮತ್ತು ಡಿಜಿಟಲ್ ರೂಪಾಂತರ, ಯುಪಿಐ(ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್), ಸಾಮರ್ಥ್ಯ ವೃದ್ಧಿ ಕ್ಷೇತ್ರದಲ್ಲಿ ಸಂಭಾವ್ಯ ಸಹಯೋಗದ ಬಗ್ಗೆ ಚರ್ಚೆ ನಡೆಸಲಾಗಿದೆ. ಕ್ರೀಡೆಗೆ ಸಂಬಂಧಿಸಿದ ಒಪ್ಪಂದವು ತರಬೇತಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಜಂಟಿ ಸಾಮರ್ಥ್ಯ ವೃದ್ಧಿಯ ಗುರಿಯನ್ನು ಹೊಂದಿದೆ. ಭಾರತದಲ್ಲಿ ತರಬೇತಿ ಪಡೆಯಲು ಟ್ರಿನಿಡಾಡ್ ಮತ್ತು ಟೊಬ್ಯಾಗೋದ ಯುವ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಪ್ರಧಾನಿ ಮೋದಿ ಆಹ್ವಾನ ನೀಡಿದರು.
ಇದಕ್ಕೂ ಮುನ್ನ ನಡೆದ ಮತ್ತೊಂದು ಸಭೆಯಲ್ಲಿ `ಟ್ರಿನಿಡಾಡ್ ಮತ್ತು ಟೊಬ್ಯಾಗೋದ ಭಾರತೀಯ ಸಮುದಾಯದ ಆರನೇ ತಲೆಮಾರಿನವರೆಗೆ ಸಾಗರೋತ್ತರ ಪೌರತ್ವ(ಒಸಿಐ) ಕಾರ್ಡ್ ಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದರು.