ತ್ರಿಪಕ್ಷೀಯ ಶಾಂತಿ ಮಾತುಕತೆ ನವೆಂಬರ್ನಲ್ಲಿ ಪುನರಾರಂಭ: ರಶ್ಯ

ವ್ಲಾಡಿಮಿರ್ ಪುಟಿನ್ | Photo Credit : PTI
ಮಾಸ್ಕೊ: ರಶ್ಯ, ಉಕ್ರೇನ್ ಮತ್ತು ಅಮೆರಿಕ ನಡುವಿನ ಮಾತುಕತೆಗಳು ನವೆಂಬರ್ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಪುನರಾರಂಭಗೊಳ್ಳಲು ಯೋಜಿಸಲಾಗಿದೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಶುಕ್ರವಾರ ತಿಳಿಸಿದ್ದಾರೆ.
ಐದನೇ ವರ್ಷಕ್ಕೆ ಕಾಲಿಡುತ್ತಿರುವ ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮುಂದಿನ ಸುತ್ತಿನ ಮಾತುಕತೆಗಳು ನವೆಂಬರ್ ಮೊದಲಾರ್ಧದಲ್ಲಿ ಅಬುಧಾಬಿಯಲ್ಲಿ ನಡೆಯಲು ಯೋಜಿಸಲಾಗಿದೆ ಮತ್ತು ತ್ರಿಪಕ್ಷೀಯ ಮಾದರಿಯಲ್ಲಿ ನಡೆಯಲಿವೆ ಎಂದು ಪೆಸ್ಕೋವ್ ತಿಳಿಸಿದ್ದಾರೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ನಡುವೆ ಈ ವಾರ ನಡೆದ ಸಭೆಯ ನಂತರ, ಮಾತುಕತೆಗಳನ್ನು ಪುನರಾರಂಭಿಸಲು ರಶ್ಯ ತನ್ನ ಸಿದ್ಧತೆಯನ್ನು ವ್ಯಕ್ತಪಡಿಸಿದೆ.
ಅಂತಿಮ ಒಪ್ಪಂದದ ಯೋಜನೆ ಕುರಿತು ಮಾತುಕತೆ: ಪುಟಿನ್
ರಶ್ಯವು ಉಕ್ರೇನ್ ಮತ್ತು ಅಮೆರಿಕದೊಂದಿಗೆ ತ್ರಿಪಕ್ಷೀಯ ಮಾತುಕತೆಗಳನ್ನು ಪುನರಾರಂಭಿಸಲು ಸಿದ್ಧವಾಗಿದೆ, ಆದರೆ ಇದು ಅಂತಿಮ ಶಾಂತಿ ಒಪ್ಪಂದದ ಭದ್ರತಾ ನಿಯಮಗಳ ಕುರಿತಾಗಿರುತ್ತದೆಯೇ ಹೊರತು ಕಿರು ಕದನ ವಿರಾಮಕ್ಕಾಗಿ ಅಲ್ಲ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.
ಯುದ್ಧದ ಒಂದು ಸಣ್ಣ ವಿರಾಮ ಈ ಚರ್ಚೆಗಳ ಗುರಿಯಲ್ಲ. ಬದಲಿಗೆ ಅಂತಿಮ ಒಪ್ಪಂದದ ಚೌಕಟ್ಟಿನೊಳಗೆ ಉಕ್ರೇನ್ ಮತ್ತು ರಶ್ಯ ಎರಡಕ್ಕೂ ಭದ್ರತೆಯನ್ನು ಖಚಿತಪಡಿಸುವ ವಿಷಯವನ್ನು ಇತ್ಯರ್ಥಪಡಿಸುವುದಾಗಿದೆ ಎಂದು ಅಧ್ಯಕ್ಷ ಪುಟಿನ್ರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ.






