ಚೀನಾದ ಕ್ಸಿಜಿಂಪಿಂಗ್ ಜೊತೆ ಒಪ್ಪಂದ ಮಾಡಿಕೊಳ್ಳಲು ತುಂಬಾ ಕಷ್ಟ: ಟ್ರಂಪ್

ಕ್ಸಿ ಜಿಂಪಿಂಗ್ , ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಜೊತೆ ಒಪ್ಪಂದ ಮಾಡಿಕೊಳ್ಳುವುದು ತುಂಬಾ ಕಷ್ಟ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
`ನಾನು ಚೀನಾದ ಅಧ್ಯಕ್ಷ ಕ್ಸಿಯನ್ನು ಇಷ್ಟಪಡುತ್ತೇನೆ, ಯಾವಾಗಲೂ. ಆದರೆ ಅವರು ತುಂಬಾ ಕಠಿಣ ವ್ಯಕ್ತಿ ಮತ್ತು ಒಪ್ಪಂದ ಮಾಡಿಕೊಳ್ಳಲು ತುಂಬಾ ಕಷ್ಟ' ಎಂದು ಬುಧವಾರ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಮೇ ತಿಂಗಳ ಮಧ್ಯಭಾಗದಲ್ಲಿ ಜಿನೆವಾದಲ್ಲಿ ನಡೆದ ಒಪ್ಪಂದದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ಪರಸ್ಪರ ಸುಂಕ ಸಮರ ತಾತ್ಕಾಲಿಕ ಸ್ಥಗಿತಗೊಂಡಿದೆ. ಆದರೆ ಒಪ್ಪಂದವನ್ನು ಉಲ್ಲಂಘಿಸಿರುವುದಾಗಿ ಎರಡೂ ದೇಶಗಳು ಪರಸ್ಪರ ಆರೋಪಿಸುತ್ತಿವೆ.
ಸುಂಕ ಸಮರಕ್ಕೆ ಟ್ರಂಪ್ ಘೋಷಿಸಿರುವ 90 ದಿನಗಳ ವಿರಾಮ ಜುಲೈ ಆರಂಭದಲ್ಲಿ ಅಂತ್ಯಗೊಳ್ಳಲಿದೆ ಎಂದು ನೆನಪಿಸಿ ಅಮೆರಿಕವು ತನ್ನ ಪಾಲುದಾರರಿಗೆ ಪತ್ರ ಬರೆದಿರುವುದಾಗಿ ಶ್ವೇತಭವನದ ಮೂಲಗಳು ಹೇಳಿವೆ. ವ್ಯಾಪಾರ ಮಾತುಕತೆಯನ್ನು ತ್ವರಿತವಾಗಿ ನಡೆಸುವಂತೆ ಅಮೆರಿಕ ಆಗ್ರಹಿಸುತ್ತಿದೆ.
ಈ ಮಧ್ಯೆ, ಎಲ್ಲಾ ಸ್ಟೀಲ್ ಮತ್ತು ಅಲ್ಯುಮೀನಿಯಂಗಳ ಆಮದಿನ ಮೇಲಿನ ಸುಂಕವನ್ನು 50%ಕ್ಕೆ ಹೆಚ್ಚಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಟ್ರಂಪ್ ಸಹಿ ಹಾಕಿರುವುದಾಗಿ ವರದಿಯಾಗಿದೆ. ಈ ಕ್ರಮವು ಕಳೆದ ತಿಂಗಳು ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟನ್ಗೆ ಅನ್ವಯಿಸುವುದಿಲ್ಲ ಎಂದು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ.







