ಟ್ರಂಪ್ ಜತೆ ಸಂಘರ್ಷ: ಮಸ್ಕ್ ಗೆ ರಾಜಕೀಯ ಆಶ್ರಯ ನೀಡಲು ಮುಂದಾದ ರಷ್ಯಾ

ಎಲಾನ್ ಮಸ್ಕ್ , ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ನಡುವಿನ ಸಂಘರ್ಷ ಉಲ್ಬಣಿಸಿದ ಬೆನ್ನಲ್ಲೇ, ಮಸ್ಕ್ ರಷ್ಯಾದಿಂದ ರಾಜಕೀಯ ಆಶ್ರಯ ಕೋರಬಹುದು ಎಂದು ರಷ್ಯಾ ಸಂಸದ ಮಿಟ್ರಿ ನೊವಿಕೋವ್ ಸಲಹೆ ಮಾಡಿದ್ದಾರೆ.
ನೊವಿಕೋವ್ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ರಷ್ಯನ್ ಫೆಡರೇಷನ್ನ ಅಂತರರಾಷ್ಟ್ರೀಯ ವ್ಯವಹಾರಗಳ ಕುರಿತ ಡ್ಯೂಮಾ ಸಮಿತಿಯ ಮೊಟ್ಟಮೊದಲ ಉಪಾಧ್ಯಕ್ಷರಾಗಿದ್ದು, ಮಸ್ಕ್ ಹಾಗೂ ಟ್ರಂಪ್ ನಡುವೆ ಆರೋಪ- ಪ್ರತ್ಯಾರೋಪಗಳು ವಿನಿಮಯವಾಗುತ್ತಿರುವ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ ಎಂದು ರಷ್ಯನ್ ಸುದ್ದಿಸಂಸ್ಥೆ ಥಾಸ್ ವರದಿ ಮಾಡಿದೆ.
"ಮಸ್ಕ್ ಅವರ ಯೋಚನೆ ಸಂಪೂರ್ಣ ಭಿನ್ನವಿದೆ ಎನ್ನುವುದು ನನ್ನ ಭಾವನೆ. ಅವರು ರಾಜಕೀಯ ಆಶ್ರಯ ಕೋರುವ ಅಗತ್ಯವಿಲ್ಲ; ಆದಾಗ್ಯೂ ಅವರು ರಾಜಕೀಯ ಆಶ್ರಯ ಕೋರಿದರೆ ರಷ್ಯಾ ಅದನ್ನು ಒದಗಿಸಬಹುದು" ಎಂದು ನೊವಿಕೋವ್ ಪ್ರತಿಕ್ರಿಯಿಸಿದರು.
ಹಲವು ವರ್ಷಗಳಿಂದ ಮಸ್ಕ್ ಒಂದು ಬಗೆಯ ರಾಜಕೀಯ ಸಂಪರ್ಕವನ್ನು ರೂಪಿಸಿಕೊಂಡಿದ್ದಾರೆ. ವೈಯಕ್ತಿಕ ಭಿನ್ನಾಭಿಪ್ರಾಯಗಳು ಪ್ರತ್ಯೇಕ ಭಿನ್ನಾಭಿಪ್ರಾಯಗಳಾಗಿಯೇ ಉಳಿಯುತ್ತವೆ ಎಂದು ಅವರು ವಿಶ್ಲೇಷಿಸಿದ್ದಾರೆ.
"ಈ ಹಂತದಲ್ಲಿ ಡೆಮಾಕ್ರಟಿಕ್ ತಂಡ ಶ್ವೇತಭವನಕ್ಕೆ ಮೂರು ವರ್ಷಗಳಲ್ಲಿ ಮರಳುವುದು ಮಸ್ಕ್ಗೆ ಬೇಕಿಲ್ಲ ಎನ್ನುವುದು ನನ್ನ ಭಾವನೆ. ಅದನ್ನು ಸ್ವೀಕರಿಸಲೂ ಅವರು ಸಿದ್ಧರಿಲ್ಲ. ಆದ್ದರಿಂದ ತಂತ್ರಗಾರಿಕೆಯ ಭಿನ್ನಾಭಿಪ್ರಾಯಗಳು ಇವೆ. ಕೆಲ ಪ್ರಮುಖ ಅಂಶಗಳೂ ಇದ್ದು, ಅವುಗಳಿಗೆ ಅವರು ಬದ್ಧರಾಗಬೇಕಾಗುತ್ತದೆ ಎನಿಸುತ್ತದೆ" ಎಂದು ವಿವರಿಸಿದ್ದಾರೆ.
ಮಸ್ಕ್ ಹೊರಗಿನವರು; ಅವರನ್ನು ಅಮೆರಿಕದಿಂದ ಗಡೀಪಾರು ಮಾಡಬೇಕು ಎಂದು ಶ್ವೇತಭವನದ ಮಾಜಿ ತಂತ್ರಗಾರ ಸ್ಟೀವ್ ಬೆನನ್ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಿಟ್ರಿ ನೊವಿಕೋವ್ ಹೇಳಿಕೆ ವಿಶೇಷ ಮಹತ್ವ ಪಡೆದಿದೆ. ತಂತ್ರಜ್ಞಾನ ದಿಗ್ಗಜ ಸಂಸ್ಥೆಯ ಮುಖ್ಯಸ್ಥ ಒಡೆತನದ ಸ್ಪೇಸ್ಎಕ್ಸ್ ಸ್ವಾಧೀನಪಡಿಸಿಕೊಳ್ಳುವಂತೆಯೂ ಅವರು ಆಗ್ರಹಿಸಿದ್ದರು.







