ವಲಸೆ ನೀತಿಗೆ ವಿರೋಧ| ಲಾಸ್ ಏಂಜಲೀಸ್ ತೀವ್ರಗೊಂಡ ಪ್ರತಿಭಟನೆ; ಮಾಸ್ಕ್ ಧರಿಸಿರುವ ವ್ಯಕ್ತಿಗಳನ್ನು ಬಂಧಿಸಲು ಟ್ರಂಪ್ ಆದೇಶ

ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ವಲಸೆ ಪ್ರಕ್ರಿಯೆಗೆ ಸಂಬಂಧಿಸಿದ ದಾಳಿಗಳನ್ನು ವಿರೋಧಿಸಿ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು ಮಾಸ್ಕ್ ಧರಿಸಿರುವ ಪ್ರತಿಭಟನಾಕಾರರನ್ನು ಬಂಧಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭದ್ರತಾ ಪಡೆಗಳಿಗೆ ಆದೇಶಿಸಿರುವುದಾಗಿ ವರದಿಯಾಗಿದೆ.
ಲಾಸ್ ಏಂಜಲೀಸ್ನಲ್ಲಿ ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಫೆಡರಲ್ ಸಿಬ್ಬಂದಿಗಳನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನೆಯನ್ನು ನಿಯಂತ್ರಿಸಲು ರಾಷ್ಟ್ರೀಯ ಸೇನಾದಳದ 2000 ಸಿಬ್ಬಂದಿಗಳನ್ನು ನಿಯೋಜಿಸಲು ಟ್ರಂಪ್ ಆದೇಶಿಸಿದ್ದರು. ಆದರೆ ತಮ್ಮ ಗುರುತನ್ನು ಮರೆಮಾಚಲು ಹಾಗೂ ಅಶ್ರುವಾಯುಗಳಿಂದ ರಕ್ಷಣೆ ಪಡೆಯಲು ಪ್ರತಿಭಟನಾಕಾರರು ಮಾಸ್ಕ್ ಧರಿಸುತ್ತಿದ್ದಾರೆ.
ʼಇನ್ನು ಮುಂದೆ ಪ್ರತಿಭಟನೆಯಲ್ಲಿ ಮಾಸ್ಕ್ ಗಳನ್ನು ಧರಿಸಲು ಅವಕಾಶವಿಲ್ಲ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ಮಾಸ್ಕ್ ಧರಿಸಿದವರನ್ನು ಬಂಧಿಸುವಂತೆ ಕಾನೂನು ಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಟ್ರಂಪ್ ಅವರ ಹೇಳಿಕೆ ವಿವಾದಕ್ಕೆ ನಾಂದಿ ಹಾಡಿದೆ. ಮಾಸ್ಕ್ ಧರಿಸುವುದನ್ನು ನಿಷೇಧಿಸುವುದು ವಾಕ್ ಸ್ವಾತಂತ್ರ್ಯ ಮತ್ತು ವಿಕಲಾಂಗರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಈ ಮಧ್ಯೆ, ಪ್ರತಿಭಟನೆ ನಿಯಂತ್ರಿಸಲು ರಾಷ್ಟ್ರೀಯ ಸೇನಾದಳವನ್ನು ನಿಯೋಜಿಸುವ ಟ್ರಂಪ್ ಆದೇಶದಿಂದ ಕೆರಳಿದ ಪ್ರತಿಭಟನಾಕಾರರು ಪ್ರಮುಖ ಹೆದ್ದಾರಿಗಳಲ್ಲಿ ತಡೆಯೊಡ್ಡಿದ್ದು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ರಸ್ತೆಗಳಲ್ಲಿ ಕಾರುಗಳು ಬೆಂಕಿಯಿಂದ ಉರಿಯುತ್ತಿರುವ ಹಾಗೂ ಜನರು ಗಾಬರಿಯಿಂದ ಓಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಿಂಸಾನಿರತರನ್ನು ಚದುರಿಸಲು ಸ್ಥಳೀಯ ಭದ್ರತಾ ಪಡೆಗಳು ಅಶ್ರುವಾಯು, ರಬ್ಬರ್ ಬುಲೆಟ್ಗಳನ್ನು ಪ್ರಯೋಗಿಸಿರುವುದಾಗಿ ವರದಿಯಾಗಿದೆ.
ಟ್ರಂಪ್ ಸರ್ಕಾರದ ವಿರುದ್ಧ ಮೊಕದ್ದಮೆ: ಕ್ಯಾಲಿಫೋರ್ನಿಯಾ ಗವರ್ನರ್ ಹೇಳಿಕೆ
ಲಾಸ್ ಏಂಜಲೀಸ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ರಾಷ್ಟ್ರೀಯ ಸೇನಾದಳವನ್ನು ನಿಯೋಜಿಸುವ ಟ್ರಂಪ್ ಆಡಳಿತದ ನಿರ್ಧಾರವನ್ನು ಪ್ರಶ್ನಿಸಿ ಮೊಕದ್ದಮೆ ದಾಖಲಿಸುವುದಾಗಿ ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಹೇಳಿದ್ದಾರೆ.
ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ವಿರೋಧಿಸಿ ಶುಕ್ರವಾರದಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ರಾಷ್ಟ್ರೀಯ ಸೇನಾದಳದ ಸುಮಾರು 2 ಸಾವಿರ ಸಿಬ್ಬಂದಿಗಳನ್ನು ಲಾಸ್ ಏಂಜಲೀಸ್ನಲ್ಲಿ ನಿಯೋಜಿಸಲಾಗಿದೆ. `ಟ್ರಂಪ್ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ರಾಷ್ಟ್ರೀಯ ಸೇನಾದಳವನ್ನು ನಿಯೋಜಿಸುವ ಕ್ರಮ ಕಾನೂನುಬಾಹಿರವಾಗಿದ್ದು ಇದನ್ನು ಪ್ರಶ್ನಿಸಿ ಮೊಕದ್ದಮೆ ದಾಖಲಿಸಲಾಗುವುದು ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.