ಒತ್ತಡ ಹೇರಿದ ಟ್ರಂಪ್; 2035ರ ವೇಳೆಗೆ ರಕ್ಷಣಾ ವೆಚ್ಚವನ್ನು ವಾರ್ಷಿಕ ಶೇ. 5ಕ್ಕೆ ಏರಿಕೆ ಮಾಡಲು ನ್ಯಾಟೊ ಸಮ್ಮತಿ
ಸಾಮೂಹಿಕ ರಕ್ಷಣೆಗೆ ಉಕ್ಕಿನ ಬದ್ಧತೆಯನ್ನು ಪುನರುಚ್ಚರಿಸಿದ ಅಂತಾರಾಷ್ಟ್ರೀಯ ಶಾಂತಿ ಪಾಲನಾ ಪಡೆ

PC : PTI
ವಾಷಿಂಗ್ಟನ್: 2035ರ ವೇಳೆಗೆ ರಕ್ಷಣಾ ಮತ್ತು ಭದ್ರತಾ ವೆಚ್ಚವನ್ನು ಪ್ರತಿ ವರ್ಷ ನ್ಯಾಟೊ ದೇಶಗಳ ಜಿಡಿಪಿಯ ಶೇ. 5ರಷ್ಟಕ್ಕೆ ಏರಿಕೆ ಮಾಡಲು ಬುಧವಾರ ನ್ಯಾಟೊ ನಾಯಕರು ಸಮ್ಮತಿ ಸೂಚಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಚ್ಚುತ್ತಿರುವ ಒತ್ತಡದಿಂದಾಗಿ ಈ ಕ್ರಮಕ್ಕೆ ಸಮ್ಮತಿ ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ನ್ಯಾಟೊ ಒಪ್ಪಂದದ ವಿಧಿ 5ರ ಅನ್ವಯ ಪರಸ್ಪರ ರಕ್ಷಣೆ ಮಾಡಿಕೊಳ್ಳುವ ತನ್ನ ಬಲಿಷ್ಠ ಬದ್ಧತೆಯನ್ನು 32 ಸದಸ್ಯ ರಾಷ್ಟ್ರಗಳನ್ನೊಳಗೊಂಡ ನ್ಯಾಟೊ ಪುನರುಚ್ಚರಿಸಿದೆ. “ನಮ್ಮ ಪ್ರಜೆಗಳು ಹಾಗೂ ಸಾಮೂಹಿಕ ಬಾಧ್ಯತೆಗಳನ್ನು ಖಾತರಿಪಡಿಸಲು, 2035ರ ವೇಳೆಗೆ ಪ್ರಮುಖ ರಕ್ಷಣಾ ಅಗತ್ಯಗಳಲ್ಲದೆ, ರಕ್ಷಣೆ ಹಾಗೂ ಭದ್ರತೆಗೆ ಸಂಬಂಧಿಸಿದ ವೆಚ್ಚಗಳಿಗಾಗಿ ಪ್ರತಿ ವರ್ಷ ನಮ್ಮ ಜಿಡಿಪಿಯ ಶೇ. 5ರಷ್ಟನ್ನು ವಿನಿಯೋಗಿಸಲು ನಮ್ಮ ಮಿತ್ರ ರಾಷ್ಟ್ರಗಳು ಬದ್ಧವಾಗಿವೆ”, ಎಂದು ಈ ಕುರಿತು ಬಿಡುಗಡೆ ಮಾಡಲಾಗಿರುವ ಅಂತಿಮ ಜಂಟಿ ಪ್ರಕಟನೆಯಲ್ಲಿ ಹೇಳಲಾಗಿದೆ.
ಈ ನಡುವೆ, ಬೆದರಿಕೆಗಳು, ಪ್ರಮುಖವಾಗಿ ರಶ್ಯದ ಬೆದರಿಕೆಗಳ ಕುರಿತ ಮೌಲ್ಯಮಾಪನ ಪ್ರಗತಿ ಹಾಗೂ ಮರು ಮೌಲ್ಯಮಾಪನದ ಮಧ್ಯಂತರ ಪರಾಮರ್ಶೆಯನ್ನು 2029ಕ್ಕೆ ನಿಗದಿಗೊಳಿಸಲಾಗಿದೆ.





