ಸುಂಕಗಳಿಲ್ಲದಿದ್ದರೆ ನಾವು ಸಾಯುತ್ತೇವೆ: ವ್ಯಾಪಾರ ತಂತ್ರಕ್ಕೆ ಟ್ರಂಪ್ ಸಮರ್ಥನೆ

ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್, ಜು.31: ತನ್ನ ಆಕ್ರಮಣಕಾರಿ ಸುಂಕ ನೀತಿಯನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಸುಂಕಗಳು ಅಮೆರಿಕವನ್ನು ಮತ್ತೆ ಶ್ರೀಮಂತ ಮತ್ತು ಶ್ರೇಷ್ಟವನ್ನಾಗಿಸುತ್ತದೆ. ಸುಂಕಗಳಿಲ್ಲದಿದ್ದರೆ ನಾವು ಸಾಯುತ್ತೇವೆ' ಎಂದು ಹೇಳಿದ್ದಾರೆ.
ನಮ್ಮ ದೇಶವು ಸುಂಕಗಳಿಗೆ ಪ್ರತಿಸುಂಕವನ್ನು ಬಳಸಿಕೊಂಡು ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದಿದ್ದರೆ ಬದುಕುಳಿಯುವ ಅಥವಾ ಯಶಸ್ಸಿನ ಯಾವುದೇ ಅವಕಾಶವಿಲ್ಲದೆ ನಾವು ಸಾಯುತ್ತೇವೆ' ಎಂದವರು ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಂದು ವರ್ಷದ ಹಿಂದೆ ಅಮೆರಿಕವು `ಸತ್ತ ರಾಷ್ಟ್ರವಾಗಿತ್ತು. ಆದರೆ ಈಗ ಅದು ಜಗತ್ತಿನ ಅತ್ಯಂತ `ತಾಜಾ' ದೇಶವಾಗಿದೆ. ಎಲ್ಲರಿಗೂ ಅಭಿನಂದನೆಗಳು. ಅಮೆರಿಕದ ವಿರುದ್ಧ ಹಲವು ದಶಕಗಳಿಂದ ಸುಂಕವನ್ನು ಬಳಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಅಮೆರಿಕವು ತನ್ನ ವಿರುದ್ಧದ ಸುಂಕ ಪ್ರಹಾರಕ್ಕೆ ಯಶಸ್ವಿಯಾಗಿ ಪ್ರತಿ ಉತ್ತರ ನೀಡಿದೆ ಎಂದವರು ಪ್ರತಿಪಾದಿಸಿದ್ದಾರೆ.
ಈ ಮಧ್ಯೆ, ಟ್ರಂಪ್ `ಅಂತರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ 1977'(ಐಇಇಪಿಎ)ಯಡಿ ವ್ಯಾಪಕ ಪ್ರಮಾಣದ ಆಮದು ಸುಂಕಗಳನ್ನು ವಿಧಿಸುವಲ್ಲಿ ತನ್ನ ಕಾನೂನುಬದ್ಧ ಅಧಿಕಾರವನ್ನು ಮೀರಿದ್ದಾರೆ ಎಂದು ಆರೋಪಿಸಿ ಡೆಮಾಕ್ರಟಿಕ್ ಪಕ್ಷದ ಆಡಳಿತವಿರುವ 12 ರಾಜ್ಯಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಕೆಲ ಗಂಟೆಗಳ ಮುನ್ನ ಟ್ರಂಪ್ ಈ ಪೋಸ್ಟ್ ಮಾಡಿದ್ದಾರೆ.







