ಗರ್ಭಾವಸ್ಥೆಯಲ್ಲಿ ಪ್ಯಾರಸಿಟಮಲ್ ಬಳಕೆ ಆಟಿಸಂನ ಅಪಾಯಕ್ಕೆ ಕಾರಣವಾಗಬಹುದು: ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್, ಸೆ.23: ಗರ್ಭಾವಸ್ಥೆಯಲ್ಲಿ ನೋವು ನಿವಾರಕ ಔಷಧ ಅಸೆಟಾಮಿನೊಫೆನ್ ಅಥವಾ ಪ್ಯಾರಸಿಟಮಲ್ ಔಷಧ ಬಳಕೆ ಆಟಿಸಂ(ಸ್ವಲೀನತೆ)ನ ಅಪಾಯದೊಂದಿಗೆ ಸಂಬಂಧ ಹೊಂದಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದು, ಪ್ಯಾರಸೆಟಮಲ್ ಔಷಧವನ್ನು ಗರ್ಭಿಣಿ ಮಹಿಳೆಯರಿಗೆ ಸೂಚಿಸದಂತೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆಯು(ಎಫ್ಡಿಎ) ವೈದ್ಯರಿಗೆ ತಿಳಿಸಲಿದೆ ಎಂದು ಹೇಳಿದ್ದಾರೆ.
ಗರ್ಭಾವಸ್ಥೆಯ ಸಂದರ್ಭ ಟೈಲೆನಾಲ್ ಅಥವಾ ಅಸೆಟಾಮಿನೊಫೆನ್ ಬಳಕೆಯನ್ನು ಕಡಿಮೆಗೊಳಿಸುವಂತೆ ಮತ್ತು ವೈದ್ಯಕೀಯ ಅಗತ್ಯವಿದ್ದರೆ ಮಾತ್ರ ಬಳಸುವಂತೆ ( ಜ್ವರ ಮುಂತಾದ ಸಂದರ್ಭದಲ್ಲಿ) ಇಲಾಖೆಯು ಮಹಿಳೆಯರಿಗೆ ಶಿಫಾರಸು ಮಾಡಿದೆ ಎಂದು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಟ್ರಂಪ್ ಹೇಳಿದ್ದಾರೆ. ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಬರ್ಟ್ ಎಫ್. ಕೆನಡಿ ಜ್ಯೂ. ಈ ಸಂದರ್ಭ ಉಪಸ್ಥಿತರಿದ್ದರು.
ಟ್ರಂಪ್ ಪ್ರತಿಪಾದನೆ ಅಪಾಯಕಾರಿ ಎಂದು ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಅಮೆರಿಕದ ಎಫ್ಡಿಎ ವೈದ್ಯರಿಗೆ ನೀಡಿರುವ ಸೂಚನಾ ಪತ್ರದಲ್ಲಿ ಟ್ರಂಪ್ಗಿಂತ ಸೌಮ್ಯ ಭಾಷೆಯನ್ನು ಬಳಸಿದೆ.`ಗರ್ಭಿಣಿ ಮಹಿಳೆಯರಲ್ಲಿ ಜ್ವರ ಮತ್ತು ನೋವಿಗೆ ಟೈಲೆನಾಲ್ ಔಷಧ ಬಳಕೆ ಸುರಕ್ಷಿತ ಆಯ್ಕೆಯಾಗಿದ್ದರೂ ಇದು ತಾಯಿಯ ಮತ್ತು ಭ್ರೂಣದ ಆರೋಗ್ಯಕ್ಕೆ ಹಾನಿ ಮಾಡುವುದರಿಂದ ಇದರ ಬಳಕೆಯನ್ನು ಸೀಮಿತಗೊಳಿಸುವಂತೆ ವೈದ್ಯರಿಗೆ ಸೂಚಿಸಿರುವುದಾಗಿ' ಪತ್ರದಲ್ಲಿ ಉಲ್ಲೇಖಿಸಿದೆ.
ಗರ್ಭಿಣಿ ಮಹಿಳೆಯರಲ್ಲಿ ಪ್ಯಾರಸಿಟಮಲ್ ಅತೀ ಸುರಕ್ಷಿತ ನೋವು ನಿವಾರಕ ಔಷಧವಾಗಿದೆ. ಈ ವಿಷಯದಲ್ಲಿ ನಾನು ಅಧ್ಯಕ್ಷ ಟ್ರಂಪ್ಗಿಂತ ವೈದ್ಯರನ್ನು ನಂಬುತ್ತೇನೆ' ಎಂದು ಬ್ರಿಟನ್ನ ಆರೋಗ್ಯ ಕಾರ್ಯದರ್ಶಿ ವೆಸ್ ಸ್ಟ್ರೀಟಿಂಗ್ ಹೇಳಿದ್ದಾರೆ. ಟ್ರಂಪ್ ಪ್ರತಿಪಾದನೆಯನ್ನು ಜಗತ್ತಿನಾದ್ಯಂತದ ಆರೋಗ್ಯ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಗರ್ಭಾವಸ್ಥೆಯ ಸಂದರ್ಭ ಪ್ಯಾರಸಿಟಮಲ್ ಬಳಕೆ ಹಾಗೂ ಆಟಿಸಂ ನಡುವಿನ ಸಂಬಂಧದ ಕುರಿತ ಯಾವುದೇ ಪುರಾವೆಗಳು ಅಸಮಂಜಸವಾಗಿ ಉಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.







