ಪಶ್ಚಿಮದಂಡೆ ಸ್ವಾಧೀನಪಡಿಸಿಕೊಂಡರೆ ಇಸ್ರೇಲ್ಗೆ ಅಮೆರಿಕಾದ ಬೆಂಬಲ ಅಂತ್ಯ: ಟ್ರಂಪ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್: ಪಶ್ಚಿಮದಂಡೆಯನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ಮುಂದುವರಿಸಿದರೆ ಇಸ್ರೇಲ್ ಅಮೆರಿಕಾದ ಎಲ್ಲಾ ಬೆಂಬಲವನ್ನೂ ಕಳೆದುಕೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಪಶ್ಚಿಮದಂಡೆಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ನಾನು ಅರಬ್ ದೇಶಗಳಿಗೆ ಭರವಸೆ ನೀಡಿದ್ದೇನೆ. ಈ ಸಂದರ್ಭದಲ್ಲಿ ಇಸ್ರೇಲ್ ಹೀಗೆ ಮಾಡುವಂತಿಲ್ಲ. ನಮಗೆ ಅರಬ್ ದೇಶಗಳ ಉತ್ತಮ ಬೆಂಬಲವಿದೆ. ಒಂದು ವೇಳೆ ಇಸ್ರೇಲ್ ಹೀಗೆ ಮಾಡಿದರೆ ಅದು ಅಮೆರಿಕಾದ ಎಲ್ಲಾ ಬೆಂಬಲವನ್ನೂ ಕಳೆದುಕೊಳ್ಳಲಿದೆ ಎಂದು `ಟೈಮ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ. ಆಕ್ರಮಿತ ಪಶ್ಚಿಮದಂಡೆಗೆ ಇಸ್ರೇಲಿ ಕಾನೂನನ್ನು ಅನ್ವಯಿಸುವ (ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಮ) ಮಸೂದೆಗೆ ಬುಧವಾರ ಇಸ್ರೇಲ್ ಸಂಸತ್ತು ಪ್ರಾಥಮಿಕ ಅನುಮೋದನೆ ನೀಡಿದೆ.
ಈ ಮಧ್ಯೆ, ಪಶ್ಚಿಮದಂಡೆಯ ಸ್ವಾಧೀನದ ಬಗ್ಗೆ ಇಸ್ರೇಲಿ ಸಂಸತ್ತಿನ ನಡೆಯು ಗಾಝಾದಲ್ಲಿನ ಯುದ್ಧ ಕೊನೆಗೊಳಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜನೆಗೆ ಬೆದರಿಕೆಯೊಡ್ಡಬಹುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮದಂಡೆ ಸ್ವಾಧೀನ ಕ್ರಮಕ್ಕೆ ಇಸ್ರೇಲಿ ಸಂಸತ್ತು ಅನುಮೋದನೆ ನೀಡಿರಬಹುದು. ಆದರೆ ಈ ಸಂದರ್ಭದಲ್ಲಿ ನಾವದನ್ನು ಬೆಂಬಲಿಸುವುದಿಲ್ಲ ಎಂದು ಅಧ್ಯಕ್ಷರೂ ಸ್ಪಷ್ಟವಾಗಿ ಹೇಳಿದ್ದಾರೆ. ಮತ್ತು ಇದು ಶಾಂತಿ ಒಪ್ಪಂದಕ್ಕೆ ಅಪಾಯಕಾರಿ ಎಂದು ನಾವು ಭಾವಿಸುತ್ತೇವೆ ಎಂದು ಇಸ್ರೇಲ್ಗೆ ತೆರಳುವುದಕ್ಕೂ ಮುನ್ನ ವಾಷಿಂಗ್ಟನ್ನಲ್ಲಿ ಸುದ್ದಿಗೋಷ್ಟಿಯಲ್ಲಿ ರೂಬಿಯೊ ಹೇಳಿದ್ದಾರೆ. ಗಾಝಾ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಅವರ 20 ಅಂಶದ ಯೋಜನೆಯ ಜಾರಿಗೆ ನೆರವಾಗಲು ಮತ್ತು ಆ ಪ್ರದೇಶದಲ್ಲಿ ಸುಸ್ಥಿರ ಆಡಳಿತ ಸ್ಥಾಪನೆಗೆ ದಾರಿ ಮಾಡಿಕೊಡುವ ಬಗ್ಗೆ ಚರ್ಚಿಸಲು ರೂಬಿಯೊ ಇಸ್ರೇಲ್ಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನದ ಮೂಲಗಳು ಹೇಳಿವೆ.







