ವರ್ಷಾಂತ್ಯದೊಳಗೆ ರಶ್ಯದಿಂದ ತೈಲ ಖರೀದಿಯನ್ನು ಬಹುತೇಕ ನಿಲ್ಲಿಸಲು ಭಾರತ ಒಪ್ಪಿಕೊಂಡಿದೆ: ಟ್ರಂಪ್ ಪುನರುಚ್ಚಾರ

ಡೊನಾಲ್ಡ್ ಟ್ರಂಪ್ | Photo credit : NDTV
ಹೊಸದಿಲ್ಲಿ: ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸಲು ಭಾರತವು ಒಪ್ಪಿಕೊಂಡಿದೆ ಎಂಬ ತನ್ನ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪುನರುಚ್ಚರಿಸಿದ್ದಾರೆ. ಭಾರತವು ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸುವುದು ಒಂದು ಪ್ರಕ್ರಿಯೆಯಾಗಿದೆ. ಅದನ್ನು ಒಮ್ಮೆಗೇ ನಿಲ್ಲಿಸಲು ಸಾಧ್ಯವಿಲ್ಲ. ಅದು ಸಂಪೂರ್ಣ ಸ್ಥಗಿತಗೊಳ್ಳಲು ಸ್ವಲ್ಪ ಕಾಲಾವಕಾಶದ ಅಗತ್ಯವಿದೆ. ಆದರೆ ಈ ವರ್ಷಾಂತ್ಯದೊಳಗೆ ಅದು ಬಹುತೇಕ ಕಡಿಮೆಯಾಗಲಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಶ್ವೇತಭವನದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ವರ್ಷಾಂತ್ಯದೊಳಗೆ ರಶ್ಯದಿಂದ ತೈಲ ಖರೀದಿ ಬಹುತೇಕ ಅಂತ್ಯಗೊಳ್ಳಲಿದೆ. ಈ ಬಗ್ಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿರುವೆ ಎಂದರು. ಭಾರತವು ಶೇ. 40ರಷ್ಟು ತೈಲವನ್ನು ರಶ್ಯದಿಂದ ಆಮದು ಮಾಡಿಕೊಳ್ಳುತ್ತಿದೆ ಎಂದರು.
ರಶ್ಯದಿಂದ ತೈಲ ಆಮದನ್ನು ಗಣನೀಯವಾಗಿ ಕಡಿಮೆಗೊಳಿಸುವುದಾಗಿ ಭಾರತವು ತನಗೆ ಭರವಸೆ ನೀಡಿದೆಯೆಂದು ಟ್ರಂಪ್ ಅವರು ಕಳೆದ ಕೆಲವು ದಿನಗಳಿಂದ ಘೋಷಿಸುತ್ತಾ ಬಂದಿದ್ದಾರೆ. ರಶ್ಯದಿಂದ ತೈಲ ಖರೀದಿಸುವ ಮೂಲಕ ಭಾರತವು ಉಕ್ರೇನ್ ಯುದ್ಧದಲ್ಲಿ ಪುಟಿನ್ ಅವರಿಗೆ ನೆರವಾಗುತ್ತಿದೆಯೆಂದು ಅಮೆರಿಕ ಆರೋಪಿಸುತ್ತಿದೆ.





