ವೆನೆಝುವೆಲಾ ಸಂಪೂರ್ಣ ಸುತ್ತುವರಿದಿದೆ: ಟ್ರಂಪ್ ಘೋಷಣೆ

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಡಿ.18: ವೆನೆಝುವೆಲಾವು ದಕ್ಷಿಣ ಅಮೆರಿಕನ್ ಇತಿಹಾಸದಲ್ಲೇ ಅತೀ ದೊಡ್ಡ ನೌಕಾಪಡೆಯಿಂದ ಸುತ್ತುವರಿದಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ದಿಗ್ಬಂಧನವನ್ನು ವಿಸ್ತರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕಾಕ್ಕೆ ಸಂಬಂಧಿಸಿದ ತೈಲ, ಭೂಮಿ ಮತ್ತು ಇತರ ಸ್ವತ್ತುಗಳನ್ನು ಅಮೆರಿಕಾಕ್ಕೆ ಹಿಂದಿರುಗಿಸುವಂತೆ ವೆನೆಝುವೆಲಾ ಮೇಲೆ ಒತ್ತಡ ಹೇರುವ ಗುರಿಯನ್ನು ಈ ಕ್ರಮವು ಹೊಂದಿದೆ ಎಂದು ಟ್ರಂಪ್ ಹೇಳಿದ್ದಾರೆ. `ನಾವು ಯಾರನ್ನು ಉದ್ದೇಶಿಸಿದ್ದೇವೆಯೋ ಅವರು ದಿಗ್ಬಂಧನವನ್ನು ಹಾದುಹೋಗಲು ಬಿಡುವುದಿಲ್ಲ. ಅವರು ನಮ್ಮ ಎಲ್ಲಾ ಇಂಧನ ಹಕ್ಕುಗಳನ್ನು, ತೈಲ ಹಕ್ಕುಗಳನ್ನು ಬಹಳ ಹಿಂದೆಯೇ ಕಾನೂನು ಬಾಹಿರವಾಗಿ ತೆಗೆದುಕೊಂಡಿದ್ದಾರೆ. ಅದನ್ನು ಮರಳಿ ಪಡೆಯಲು ನಾವು ಬಯಸುತ್ತೇವೆ' ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
1970ರವರೆಗೆ ಅಮೆರಿಕಾದ ತೈಲ ಕಂಪೆನಿಗಳು ವೆನೆಝುವೆಲಾದ ಪೆಟ್ರೋಲಿಯಂ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದವು. ಬಳಿಕ ಮಾಜಿ ಅಧ್ಯಕ್ಷ ಹ್ಯೂಗೊ ಚವೆಝ್ ಮತ್ತು ಅವರ ಉತ್ತರಾಧಿಕಾರಿ, ಹಾಲಿ ಅಧ್ಯಕ್ಷ ನಿಕೋಲಸ್ ಮಡುರೋ ಆಡಳಿತ ಪೆಟ್ರೋಲಿಯಂ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿತ್ತು. ಈ ಸಂದರ್ಭ ಅಮೆರಿಕನ್ ಸಂಸ್ಥೆಗಳಿಗೆ ನೀಡಿರುವ ಪರಿಹಾರ ಅಸಮರ್ಪಕವಾಗಿದೆ ಎಂದು ಅಮೆರಿಕಾ ಬಹಳ ಹಿಂದಿನಿಂದಲೂ ವಾದಿಸುತ್ತಿದೆ. ಅಮೆರಿಕಾದ ತೈಲ ಮತ್ತು ಅನಿಲ ಸಂಸ್ಥೆ `ಎಕ್ಸಾನ್ಮೊಬಿಲ್'ಗೆ 1.6 ಶತಕೋಟಿ ಡಾಲರ್ ಪರಿಹಾರ ನೀಡುಸವಂತೆ ಅಂತರಾಷ್ಟ್ರೀಯ ಮಧ್ಯಸ್ಥಿಕೆ ಸಮಿತಿ 2014ರಲ್ಲಿ ವೆನೆಝುವೆಲಾ ಸರಕಾರಕ್ಕೆ ಆದೇಶಿಸಿತ್ತು. ಇದೇ ರೀತಿಯ ಭಾರೀ ಪರಿಹಾರ ಮೊತ್ತವನ್ನು ಇತರ ಕೆಲವು ಸಂಸ್ಥೆಗಳಿಗೂ ವೆನೆಝುವೆಲಾ ಪಾವತಿಸಬೇಕೆಂದು ಸಮಿತಿ ಸೂಚಿಸಿತ್ತು. ಈ ಪರಿಹಾರ ಮೊತ್ತ ಪಾವತಿಸದೆ ವೆನೆಝುವೆಲಾ ಸಾಗಿಸುವ ತೈಲ `ನಿರ್ಬಂಧಿತ ತೈಲ' ಎಂದು ಟ್ರಂಪ್ ಆಡಳಿತ ಪ್ರತಿಪಾದಿಸುತ್ತಿದ್ದು ಮಡುರೊ ನೇತೃತ್ವದ ಸರಕಾರವನ್ನು ವಿದೇಶಿ ಭಯೋತ್ಪಾದಕ ಸಂಘಟನೆಯೆಂದು ನಿಯೋಜಿಸುವುದಾಗಿ ಘೋಷಿಸಿದೆ.
ಕಾನೂನುಬಾಹಿರ ಮಡುರೊ ಆಡಳಿತವು ಈ ಕದ್ದ ತೈಲ ಕ್ಷೇತ್ರಗಳಿಂದ ತೈಲವನ್ನು ಮಾದಕ ವಸ್ತು ಭಯೋತ್ಪಾದನೆ, ಮಾನವ ಕಳ್ಳಸಾಗಣೆ, ಕೊಲೆ ಮತ್ತು ಅಪಹರಣ ಕೃತ್ಯಗಳಿಗೆ ಬಳಸುತ್ತಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ತೈಲ ವಲಯವನ್ನು ರಾಷ್ಟ್ರೀಕರಣಗೊಳಿಸುವ ವೆನೆಝುವೆಲಾದ ಕ್ರಮವು ದರೋಡೆಗೆ ಸಮವಾಗಿದೆ ಎಂದು ಅಮೆರಿಕಾದ ಸೇನಾಧಿಕಾರಿ ಸ್ಟೀಫನ್ ಮಿಲರ್ ಹೇಳಿದ್ದಾರೆ.
ಅಮೆರಿಕಾದ ಬೆವರು, ಜಾಣ್ಮೆ ಮತ್ತು ಶ್ರಮವು ವೆನೆಝುವೆಲಾದಲ್ಲಿ ತೈಲ ಉದ್ಯಮವನ್ನು ಸೃಷ್ಟಿಸಿತು. ಅದರ ದಬ್ಬಾಳಿಕೆಯ ಸ್ವಾಧೀನವು ಅಮೆರಿಕಾದ ಸಂಪತ್ತು ಮತ್ತು ಆಸ್ತಿಯ ಅತೀ ದೊಡ್ಡ ಕಳ್ಳತನವಾಗಿದೆ. ಈ ಕೊಳ್ಳೆಹೊಡೆದ ಸ್ವತ್ತುಗಳನ್ನು ನಂತರ ಭಯೋತ್ಪಾದನೆಗೆ ಧನಸಹಾಯ ಮಾಡಲು ಮತ್ತು ಅಮೆರಿಕಾದ ಬೀದಿಗಳನ್ನು ಕೊಲೆಗಡುಕರು, ಬಾಡಿಗೆ ಹಂತಕರು ಮತ್ತು ಮಾದಕ ವಸ್ತುಗಳಿಂದ ತುಂಬಿಸಲು ಬಳಸಲಾಗುತ್ತಿದೆ ಎಂದವರು ಆರೋಪಿಸಿದ್ದಾರೆ.







