ವೆನೆಝುವೆಲಾದ ತೈಲ ರಫ್ತು ಮೇಲೆ ನಿಯಂತ್ರಣ: ಟ್ರಂಪ್ ಸರಕಾರ ಘೋಷಣೆ

PC: PTI
ವಾಷಿಂಗ್ಟನ್, ಜ.8: ಮುಂದಿನ ದಿನಗಳಲ್ಲಿ ವೆನೆಝುವೆಲಾದ ತೈಲದ ಮಾರಾಟವನ್ನು ನಿಯಂತ್ರಿಸಲು ಮತ್ತು ಆದಾಯವನ್ನು ಅಮೆರಿಕಾದ ಖಾತೆಗಳಲ್ಲಿ ಜಮೆಗೊಳಿಸಲು ಟ್ರಂಪ್ ಆಡಳಿತ ಯೋಜಿಸಿದೆ ಎಂದು ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಹೇಳಿದ್ದು ವೆನೆಝುವೆಲಾದ ತೈಲ ಸಂಪನ್ಮೂಲಕ್ಕೆ ಸಂಬಂಧಿಸಿ ಅಮೆರಿಕಾದ ಕಾರ್ಯತಂತ್ರದ ಕುರಿತು ಸ್ಪಷ್ಟ ಸೂಚನೆ ನೀಡಿದ್ದಾರೆ.
ವೆನೆಝುವೆಲಾದ ತೈಲ ಮಾರಾಟದ ಮೇಲೆ ಅಮೆರಿಕಾದ ದಿಗ್ಬಂಧನದ ಹಿನ್ನೆಲೆಯಲ್ಲಿ ಕಚ್ಛಾತೈಲಗಳು ಅಲ್ಲಿನ ಸಂಗ್ರಹಣೆಯಲ್ಲಿವೆ. ಆರಂಭದಲ್ಲಿ ಅದನ್ನು ತೆರವುಗೊಳಿಸಿ ಮಾರಾಟ ಮಾಡಬೇಕಾಗಿದೆ. ವೆನೆಝುವೆಲಾದಿಂದ ಬರುವ ಕಚ್ಛಾತೈಲಗಳನ್ನು ನಾವು ಮಾರುತ್ತೇವೆ. ನಂತರ ಅನಿರ್ದಿಷ್ಟವಾಗಿ ವೆನೆಝುವೆಲಾದ ತೈಲ ಉತ್ಪಾದನೆಯನ್ನು ನಾವು ಮಾರಾಟ ಮಾಡುತ್ತೇವೆ. ನಾವು ಯಾರೊಬ್ಬರ ಹಣವನ್ನೂ ಕದಿಯುತ್ತಿಲ್ಲ. ಜಾಗತಿಕ ಕಚ್ಛಾ ತೈಲ ಮಾರುಕಟ್ಟೆಯಲ್ಲಿ ವೆನೆಝುವೆಲಾದ ತೈಲ ಮಾರಾಟವನ್ನು ಪುನರಾರಂಭಿಸಲಿದ್ದೇವೆ. ವೆನೆಝುವೆಲಾದ ಹೆಸರಿನಲ್ಲಿ ಅಮೆರಿಕಾದಲ್ಲಿ ತೆರೆಯುವ ಖಾತೆಗಳಲ್ಲಿ ಹಣವನ್ನು ಜಮೆಗೊಳಿಸುತ್ತೇವೆ ಮತ್ತು ಈ ಹಣವನ್ನು ವೆನೆಝುವೆಲಾ ಜನತೆಯ ಪ್ರಯೋಜನಕ್ಕೆ ಬಳಸುತ್ತೇವೆ ಎಂದು ಕ್ರಿಸ್ ರೈಟ್ ಹೇಳಿದ್ದಾರೆ.
ವೆನೆಝುವೆಲಾದ ತೈಲ ಮೂಲಸೌಕರ್ಯಗಳನ್ನು ಪುನರ್ನಿಮಿಸಲು ಮತ್ತು ಉತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಅಮೆರಿಕಾದ ಇಂಧನ ಕಂಪನಿಗಳಿಗೆ ಟ್ರಂಪ್ ಆಡಳಿತ ಒತ್ತಾಯಿಸುತ್ತಿರುವುದಾಗಿ ವರದಿಯಾಗಿದೆ. ಪ್ರಯತ್ನದ ಭಾಗವಾಗಿ ವೆನೆಝುವೆಲಾದ ತೈಲ ಕ್ಷೇತ್ರದ ಮೇಲಿನ ನಿರ್ಬಂಧಗಳನ್ನು ಅಮೆರಿಕಾ ಎಚ್ಚರಿಕೆ ವಹಿಸಿ ಹಿಂತೆಗೆದುಕೊಳ್ಳುತ್ತಿದೆ ಎಂದು ಇಂಧನ ಇಲಾಖೆಯ ಮೂಲಗಳು ಹೇಳಿವೆ. ವೆನೆಝುವೆಲಾ ಸುಮಾರು 50 ದಶಲಕ್ಷ ಬ್ಯಾರಲ್ಗಳಷ್ಟು (ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಸುಮಾರು 2.8 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ) ತೈಲವನ್ನು ಅಮೆರಿಕಾಕ್ಕೆ ಮಾರಾಟ ಮಾಡಲು ಬಿಟ್ಟುಕೊಡುತ್ತದೆ ಎಂದು ಮಂಗಳವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.
ವೆನೆಝುವೆಲಾದ ಕಚ್ಛಾತೈಲದ ಮಾರಾಟ ಪ್ರಕ್ರಿಯೆಗೆ ಅಮೆರಿಕಾ ಈಗಾಗಲೇ ಚಾಲನೆ ನೀಡಿದ್ದು ಇದರಿಂದ ಬರುವ ಆದಾಯವನ್ನು ಅಮೆರಿಕಾದ ಖಜಾನೆ ಖಾತೆಯಲ್ಲಿ ಜಮೆಗೊಳಿಸಲಾಗುವುದು. ಈ ಕ್ರಮವು ವೆನೆಝುವೆಲಾ ಮತ್ತು ಅಮೆರಿಕಾ ಎರಡೂ ದೇಶಗಳ ಜನತೆಗೆ ಪ್ರಯೋಜನವಾಗಲಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯರೊಲಿನ್ ಲೆವಿಟ್ ಬುಧವಾರ ಸುದ್ದಿಗೋಷ್ಟಿಯಲ್ಲಿ ಹೇಳಿಕೆ ನೀಡಿದ್ದಾರೆ.
ಅಮೆರಿಕಾದ ಎಕ್ಸಾನ್ ಮೊಬಿಲ್ ಕಾರ್ಪೊರೇಷನ್, ಕೊನೊಕೊಫಿಲಿಪ್ಸ್ ಮತ್ತಿತರ ಸಂಸ್ಥೆಗಳ ಸೊತ್ತುಗಳನ್ನು ಸುಮಾರು 20 ವರ್ಷಗಳ ಹಿಂದೆ ಮಡುರೋ ಅವರ ಪೂರ್ವಾಧಿಕಾರಿಗಳು ರಾಷ್ಟ್ರೀಕರಣಗೊಳಿಸಿದ್ದರು. ವೆನೆಝುವೆಲಾದ ತೈಲ ಮಾರಾಟದಿಂದ ಬರುವ ಆದಾಯದಲ್ಲಿ ಈ ಕಂಪನಿಗಳಿಗೆ ಪರಿಹಾರ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಲೆವಿಟ್ `ಇದು ದೀರ್ಘಾವಧಿಯಲ್ಲಿ ಗಮನ ಹರಿಸಬೇಕಿರುವ ವಿಷಯವಾಗಿದೆ' ಎಂದರು.
ಬೃಹತ್ ಕಚ್ಛಾತೈಲ ನಿಕ್ಷೇಪ
ವಿಶ್ವದಲ್ಲಿ ಬೃಹತ್ ಕಚ್ಛಾತೈಲ ನಿಕ್ಷೇಪ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ವೆನೆಝುವೆಲಾ ಗುರುತಿಸಿಕೊಂಡಿದೆ. ಆದರೆ ಭ್ರಷ್ಟಾಚಾರ, ಹೂಡಿಕೆಯ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದರ ಉತ್ಪಾದನೆಯು ದಿನಕ್ಕೆ 10 ಲಕ್ಷ ಬ್ಯಾರೆಲ್ಗಿಂತ ಕಡಿಮೆಯಿದೆ. ಅತೀ ಶೀಘ್ರದಲ್ಲೇ ದಿನಕ್ಕೆ ಹಲವಾರು ಲಕ್ಷ ಬ್ಯಾರೆಲ್ ಉತ್ಪಾದನೆಯನ್ನು ಹೆಚ್ಚಿಸಲು ಅಮೆರಿಕಾ ಉದ್ದೇಶಿಸಿದೆ.







