ಖತರ್ ಉಡುಗೊರೆಯಾಗಿ ನೀಡಿದ `ಏರ್ ಫೋರ್ಸ್ ಒನ್' ವಿಮಾನದ ಭದ್ರತೆಗೆ ಸಂಬಂಧಿಸಿ ವರದಿ : `ನ್ಯೂಯಾರ್ಕ್ ಟೈಮ್ಸ್' ಪತ್ರಕರ್ತರಿಗೆ ಟ್ರಂಪ್ ಆಡಳಿತದಿಂದ ಸಮನ್ಸ್

Photo Credit : NDTV
ನ್ಯೂಯಾರ್ಕ್, ಜು.12: ಖತರ್ನಿಂದ ಉಡುಗೊರೆಯಾಗಿ ಪಡೆದ ಅಮೆರಿಕದ ಅಧ್ಯಕ್ಷರ ಹೊಸ `ಏರ್ ಫೋರ್ಸ್ ಒನ್' ವಿಮಾನದ ಭದ್ರತೆಗೆ ಸಂಬಂಧಿಸಿದ ಕಾಳಜಿಗಳ ಬಗ್ಗೆ ವರದಿ ಮಾಡಿದ್ದಕ್ಕಾಗಿ, ಟ್ರಂಪ್ ಆಡಳಿತವು `ನ್ಯೂಯಾರ್ಕ್ ಟೈಮ್ಸ್'ನ ಹಲವಾರು ಪತ್ರಕರ್ತರಿಗೆ ಸಮನ್ಸ್ ಜಾರಿ ಮಾಡಿರುವುದಾಗಿ ಪತ್ರಿಕೆ ವರದಿ ಮಾಡಿದೆ.
ಅಮೆರಿಕದ ನ್ಯಾಯಾಂಗ ಇಲಾಖೆಯು ಶುಕ್ರವಾರ ಪತ್ರಕರ್ತರಿಗೆ ಸಮನ್ಸ್ ನೀಡಿದ್ದು `ಫೆಡರಲ್ ಕ್ರಿಮಿನಲ್ ಕಾನೂನಿನ ಉಲ್ಲಂಘನೆ' ಆರೋಪಕ್ಕೆ ಸಂಬಂಧಿಸಿದಂತೆ ಐದು ದಿನಗಳ ನಂತರ ಮ್ಯಾನ್ಹ್ಯಾಟನ್ನಲ್ಲಿರುವ ಫೆಡರಲ್ ಗ್ರಾಂಡ್ ಜ್ಯೂರಿ ಮುಂದೆ ಹೇಳಿಕೆ ನೀಡುವಂತೆ ಪತ್ರಕರ್ತರಿಗೆ ಸೂಚಿಸಲಾಗಿದೆ.
ಹೊಸ ವಿಮಾನವು ಸಾಕಷ್ಟು ಸುರಕ್ಷಿತವಾಗಿಲ್ಲ ಮತ್ತು ತುರ್ಕಿಯೆಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಿಂದ ಸ್ವದೇಶಕ್ಕೆ ಹಿಂದಿರುಗುವಾಗ ವಿಮಾನವನ್ನು ಬದಲಾಯಿಸುವಂತೆ ಗುಪ್ತಚರ ಸೇವಾ ಇಲಾಖೆಯು ಅಧ್ಯಕ್ಷರನ್ನು ಒತ್ತಾಯಿಸಿತ್ತು ಎಂದು ವರದಿ ಮಾಡಿದ್ದಕ್ಕಾಗಿ ಈ ಸುದ್ದಿ ಸಂಸ್ಥೆಯು ತನಿಖೆಯನ್ನು ಎದುರಿಸುತ್ತಿದೆ. ಈ ಕ್ರಮವನ್ನು `ಸ್ವತಂತ್ರ ಸುದ್ದಿ ಸಂಸ್ಥೆಗಳನ್ನು ಬೆದರಿಸಲು ಮತ್ತು ಹೆದರಿಸಲು ಅಧ್ಯಕ್ಷ ಟ್ರಂಪ್ ಮಾಡುತ್ತಿರುವ ಪ್ರಯತ್ನಗಳ ಅಸಾಧಾರಣ ಹೆಚ್ಚಳ' ಎಂದು ಪತ್ರಿಕೆ ಬಣ್ಣಿಸಿದೆ.




