ಟ್ರಂಪ್ ಆಡಳಿತದಿಂದ ವೀಸಾ ಪರಿಶೀಲನೆ; 6000 ವಿದ್ಯಾರ್ಥಿ ವೀಸಾ ರದ್ದು

PC: x.com/Richard_ezio
ವಾಷಿಂಗ್ಟನ್: ಅಮೆರಿಕದ ರಕ್ಷಣಾ ಇಲಾಖೆ ದೇಶದ ಗಡಿ ಪ್ರದೇಶಗಳಲ್ಲಿ ನೀಡಿರುವ ಎಲ್ಲ 5.5 ಕೋಟಿ ವೀಸಾಗಳ ಮರು ಪರಿಶೀಲನೆ ನಡೆಸುತ್ತಿದೆ. ಈ ಮೂಲಕ ವೀಸಾ ರದ್ದತಿಗೆ ಸಂಭಾವ್ಯ ಕಾರಣಗಳನ್ನು ಪತ್ತೆ ಮಾಡುವ ಮತ್ತು ಗಡೀಪಾರು ಮಾಡುವ ಕ್ರಮ ಕೈಗೊಂಡಿದೆ ಎಂದು ಎಪಿ ವರದಿ ಮಾಡಿದೆ.
ಎಲ್ಲ ವೀಸಾದಾರರು ನಿರಂತರ ತಪಾಸಣೆಗೆ ಒಳಗಾಗಲಿದ್ದು, ಅವಧಿ ಮೀರಿ ವಾಸವಿರುವುದು, ಅಪರಾಧಾತ್ಮಕ ನಡತೆ ಅಥವಾ ಭಯೋತ್ಪಾದಕ ಚಟುವಟಿಕೆಗಳ ಮೇಲೆ ನಿಗಾ ಸೇರಿದಂತೆ ಯಾವುದೇ ಅನರ್ಹತೆಯ ಸಾಧ್ಯತೆಗಳ ಮೇಲೆ ನಿಗಾ ಇರಿಸುವಂಥ ಕ್ರಮಗಳನ್ನು ಕೈಗೊಳ್ಳುವುದಾಗಿ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.
"ವೀಸಾದಾರರು ಅನರ್ಹ ಎಂದು ಕಂಡುಬಂದಲ್ಲಿ ವೀಸಾ ರದ್ದತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಅಂಥ ವ್ಯಕ್ತಿ ಅಮೆರಿಕದಲ್ಲಿ ವಾಸವಿದ್ದಲ್ಲಿ ಗಡೀಪಾರು ಮಾಡಲಾಗುತ್ತದೆ ಎಂದು ವಿವರಿಸಿದೆ. ವೀಸಾ ಹೊಂದಿರುವವರ ಸಾಮಾಜಿಕ ಜಾಲತಾಣ ಪ್ರೊಫೈಲ್ ಗಳನ್ನು ಪರಿಶೀಲಿಸುವುದು, ಸ್ವದೇಶದ ಕಾನೂನು ಜಾರಿ, ಇಮಿಗ್ರೇಶನ್ ದಾಖಲೆಗಳು ಮತ್ತು ಅಮೆರಿಕಕ್ಕೆ ಬಂದ ಬಳಿಕ ಅಮೆರಿಕ ಕಾನೂನುಗಳನ್ನು ಯಾವುದೇ ಬಗೆಯಲ್ಲಿ ಉಲ್ಲಂಘಿಸಲಾಗಿದೆಯೇ ಎಂದು ಪರಿಶೀಲಿಸುವುದು ಸೇರಿದೆ ಎಂದು ವಿವರಿಸಲಾಗಿದೆ.
ಆರಂಭಿಕ ಹಂತದಲ್ಲಿ ಪ್ಯಾಲೆಸ್ತೀನಿ ಪರ ಅಥವಾ ಇಸ್ರೇಲ್ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸಿ ವಿದ್ಯಾರ್ಥಿ ವೀಸಾಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಇದೀಗ ಎಲ್ಲ ವರ್ಗದ ವೀಸಾಗಳಿಗೆ ಈ ಕ್ರಮವನ್ನು ವಿಸ್ತರಿಸಲಾಗಿದೆ. ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವ ಟ್ರಂಪ್ ಆಡಳಿತದ ಬದ್ಧತೆಗೆ ಅನುಸಾರವಾಗಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ವೀಸಾಗಳನ್ನು ರದ್ದು ಮಾಡಿದೆ. ವಿದ್ಯಾರ್ಥಿಗಳ ಆರು ಸಾವಿರ ವೀಸಾಗಳು ರದ್ದಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ನಾಲ್ಕು ಪಟ್ಟು ಅಧಿಕ ಎಂದು ಮೂಲಗಳು ವಿವರಿಸಿವೆ.







