ಭಾರತ – ಪಾಕಿಸ್ತಾನ ಜೊತೆಯಾಗಿ ಭೋಜನಕೂಟ ಆಯೋಜಿಸುವಂತೆ ಟ್ರಂಪ್ ಸಲಹೆ

ಡೊನಾಲ್ಡ್ ಟ್ರಂಪ್ (Photo: PTI)
ರಿಯಾದ್: ತಮ್ಮನ್ನು ಶಾಂತಿಸ್ಥಾಪಕ ಎಂದು ಕರೆದುಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ಅಣ್ವಸ್ತ್ರ ಶಕ್ತ ನೆರೆಯ ರಾಷ್ಟ್ರಗಳು ತಮ್ಮ ನಡುವಿನ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಹಾಗೂ ಪಾಕಿಸ್ತಾನ ಭೋಜನಕೂಟ ನಡೆಸಬೇಕು" ಎಂದು ಸಲಹೆ ನೀಡಿದ್ದಾರೆ.
ಸೌದಿ ಅರೇಬಿಯಾ ದೊರೆ ಮುಹಮ್ಮದ್ ಬಿನ್ ಸಲ್ಮನ್, ಟೆಸ್ಲಾ ಸಿಇಒ ಎಲಾನ್ ಮಸ್ಕ್, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತಿತರ ಗಣ್ಯರು ಪಾಲ್ಗೊಂಡಿದ್ದ ಅಮೆರಿಕ-ಸೌದಿ ಹೂಡಿಕೆ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಲಕ್ಷಾಂತರ ಮಂದಿಯನ್ನು ಬಲಿ ಪಡೆಯುವ ಸಾಧ್ಯತೆ ಇದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಅಣ್ವಸ್ತ್ರ ಸಮರವನ್ನು ತಪ್ಪಿಸಲು ತಮ್ಮ ಆಡಳಿತ ಮಧ್ಯಸ್ಥಿಕೆ ವಹಿಸಿ ಶಾಂತಿ ಸ್ಥಾಪಿಸಲು ನೆರವಾಗಿದೆ" ಎಂದು ಸಮರ್ಥಿಸಿಕೊಂಡರು.
ಉಪಾಧ್ಯಕ್ಷ ಜೆ.ಡಿ.ವಾನ್ಸ್ ಮತ್ತು ಕಾರ್ಯದರ್ಶಿ ರುಬಿಯೊ ಪಾಲ್ಗೊಂಡಿದ್ದ ಅಮೆರಿಕ ನೇತೃತ್ವದ ಶಾಂತಿಸ್ಥಾಪನೆ ಮಾತುಕತೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ವಾಸ್ತವವಾಗಿ ಅಮೆರಿಕ ಜೊತೆ ಸಹಕರಿಸಿವೆ ಎಂದು ಹೇಳಿದರು.
ಅವರು ವಾಸ್ತವವಾಗಿ ಜೊತೆ ಸೇರಿದ್ದಾರೆ ಎನ್ನುವುದು ನನ್ನ ಭಾವನೆ. ಅವರು ಹೊರಬಂದು ಒಳ್ಳೆಯ ಭೋಜನಕೂಟ ನಡೆಸಿದರೆ ಅವರು ಇನ್ನಷ್ಟು ಹತ್ತಿರವಾಗಬಹುದು. ಅದು ಒಳ್ಳೆಯದಲ್ಲವೇ? ಎಂದು ಮಧ್ಯಪ್ರಾಚ್ಯ ದೇಶಗಳಿಗೆ ಮೂರು ದಿನಗಳ ಭೇಟಿ ನೀಡಿರುವ ಟ್ರಂಪ್ ಪ್ರಶ್ನಿಸಿದರು.
ಆದರೆ ಕದನ ವಿರಾಮದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಭಾರತ ನಿರಾಕರಿಸಿದ್ದು, ಪಾಕಿಸ್ತಾನ ಜತೆಗಿನ ಒಡಂಬಡಿಕೆ ನೇರ ಚರ್ಚೆಯ ಫಲ ಎಂದು ಹೇಳಿದೆ. ಟ್ರಂಪ್ ಮಾತ್ರ ಮಧ್ಯಸ್ಥಿಕೆ ವಹಿಸಿರುವುದಾಗಿ ಪುನರುಚ್ಚರಿಸಿದ್ದಾರೆ.







