ಭಾರತದ ಗರಿಷ್ಠ ಸುಂಕವು ಅಮೆರಿಕದ ಉದ್ಯೋಗಕ್ಕೆ ಮಾರಕ: ಶ್ವೇತಭವನ ಸಲಹೆಗಾರ ಟೀಕೆ

ಪೀಟರ್ ನವಾರ್ರೊ (Photo: ANI)
ಹೊಸದಿಲ್ಲಿ: ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತ ಲಾಭಕೋರನೀತಿ ಅನುಸರಿಸುತ್ತಿದೆ ಹಾಗೂ ಅಮೆರಿಕದ ಮೇಲೆ ಗರಿಷ್ಠ ಸುಂಕ ವಿಧಿಸುವ ಮೂಲಕ ಅಮೆರಿಕನ್ನರ ಉದ್ಯೋಗಕ್ಕೆ ಕತ್ತರಿ ಹಾಕಿದೆ ಎಂದು ಶ್ವೇತಭವನದ ಹಿರಿಯ ಸಲಹೆಗಾರ ಪೀಟರ್ ನವಾರ್ರೊ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಇದು ಸತ್ಯ; ಭಾರತದ ಗರಿಷ್ಠ ಸುಂಕವು ಅಮೆರಿಕದ ಉದ್ಯೋಗಕ್ಕೆ ಮಾರಕ. ರಷ್ಯಾದ ಯುದ್ಧನೀತಿಗೆ ಕೊಡುಗೆ ನೀಡುವ ಸಲುವಾಗಿ ಮತ್ತು ಲಾಭಕ್ಕಾಗಿ ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಉಕ್ರೇನ್ ಹಾಗೂ ರಷ್ಯಾ ಜನತೆ ಸಾಯುತ್ತಿದ್ದಾರೆ. ಅಮೆರಿಕ ತೆರಿಗೆ ಪಾವತಿದಾರರು ಹೆಚ್ಚು ಪಾವತಿಸಬೇಕಾಗಿದೆ. ಭಾರತ ಸತ್ಯವನ್ನು ನಿಭಾಯಿಸಲಾರದು" ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಭಾರತದ ವಿರುದ್ಧ ಅಮೆರಿಕ ಬಳಸುತ್ತಿರುವ ಕಟು ಭಾಷೆ ಉಭಯ ದೇಶಗಳ ನಡುವಿನ ಸಂಬಂಧ ಹದಗೆಡುತ್ತಿರುವುದರ ಸಂಕೇತ ಎಂದು ʼವಾಷಿಂಗ್ಟನ್ ಪೋಸ್ಟ್ʼ ನ ಲೇಖನವೊಂದು ಪ್ರತಿಪಾದಿಸಿದ ಬೆನ್ನಲ್ಲೇ ಶ್ವೇತಭವನದ ಸಲಹೆಗಾರರು ಈ ಹೇಳಿಕೆ ನೀಡಿರುವುದು ವಿಶೇಷ ಮಹತ್ವ ಪಡೆದಿದೆ.
ಮಾಸ್ಕೊ ಜತೆಗಿನ ವ್ಯಾಪಾರವನ್ನು ಸ್ಥಗಿತಗೊಳಿಸಲು ಭಾರತ ನಿರಾಕರಿಸಿದ ಹಿನ್ನೆಲೆಯಲ್ಲಿ ನವಾರ್ರೊ ಭಾರತವನ್ನು ಗುರಿ ಮಾಡಿದ್ದಾರೆ. ಉಕ್ರೇನ್ ಜತೆಗಿನ ಸಂಘರ್ಷವನ್ನು ಮೋದಿಯ ಯುದ್ಧ ಎಂದು ಬಣ್ಣಿಸಿದ ಅವರು, ಭಾರತವನ್ನು ರಷ್ಯಾದ ಧೋಬಿಖಾನೆ ಎಂದು ಟೀಕಿಸಿದ್ದಾರೆ. ಕಳೆದ ವಾರ ʼಬ್ಲೂಮ್ಬರ್ಗ್ ಟಿವಿʼಗೆ ನೀಡಿದ ಸಂದರ್ಶನದಲ್ಲಿ, ರಷ್ಯಾದ ಯುದ್ಧಯಂತ್ರಕ್ಕೆ ಭಾರತ ಉಣಿಸುತ್ತಿದೆ. ಅಂದರೆ ಮೋದಿಯ ಯುದ್ಧ; ಏಕೆಂದರೆ ಶಾಂತಿಯ ಮಾರ್ಗವು ಭಾಗಶಃ ಭಾರತದ ಮೂಲಕವೂ ಹಾದುಹೋಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.







