Quad Summit | ಮನಿಲಾದಲ್ಲಿ 4 ʼಕ್ವಾಡ್ʼ ಉಪಕ್ರಮಗಳನ್ನು ಘೋಷಿಸಿದ ಟ್ರಂಪ್: AI, ವ್ಯಾಪಾರ, ಕಡಲ ಭದ್ರತೆಗೆ ಆದ್ಯತೆ

ಡೊನಾಲ್ಡ್ ಟ್ರಂಪ್ | Photo Credit : PTI
ಮನಿಲಾ: ಮಂಗಳವಾರ ಮನಿಲಾದಲ್ಲಿ ನಡೆದ `ಕ್ವಾಡ್' ನಾಯಕರ ಸಭೆಯಲ್ಲಿ ವ್ಯಾಪಾರ, ಕೃತಕ ಬುದ್ಧಿಮತ್ತೆ(ಎಐ), ಕಡಲ ಭದ್ರತೆ ಮತ್ತು ಸೈಬರ್ ಭದ್ರತೆಯನ್ನು ಒಳಗೊಂಡ ನಾಲ್ಕು ಉಪಕ್ರಮಗಳನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ.
ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಈ ಉಪಕ್ರಮಗಳು ಪೂರಕವಾಗಿವೆ. ಆರ್ಥಿಕ ಭದ್ರತೆ, ಕೃತಕ ಬುದ್ಧಿಮತ್ತೆ (ಎಐ), ಕಡಲ ಕಣ್ಗಾವಲು ಮತ್ತು ಸೈಬರ್ ಭದ್ರತೆಯನ್ನು ಕ್ವಾಡ್ ಕಾರ್ಯಸೂಚಿಯ ಕೇಂದ್ರಬಿಂದುವನ್ನಾಗಿ ಇರಿಸಲಾಗಿದೆ. ತನ್ನ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೆಚ್ಚು ಪ್ರಾಯೋಗಿಕ ಸಹಕಾರದ ಚೌಕಟ್ಟಾಗಿ ಪರಿವರ್ತಿಸಲು ಕ್ವಾಡ್ ಎದುರು ನೋಡುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ಚೀನಾದೊಂದಿಗೆ ಮಹತ್ವದ ಮಾತುಕತೆಗಳಿಗೆ ವಾಷಿಂಗ್ಟನ್ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಈ ಘೋಷಣೆಗಳು ಹೊರಬಿದ್ದಿವೆ.
ಫಿಲಿಪೈನ್ಸ್ ನಲ್ಲಿ ನಡೆದ ಪ್ರಾದೇಶಿಕ ಶೃಂಗಸಭೆಗಳ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಟ್ರಂಪ್, ಜಪಾನ್ ಪ್ರಧಾನಿ ಸನೇ ತಕೈಚಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಭೇಟಿಯಾದ ಸಂದರ್ಭದಲ್ಲಿ ಈ ಘೋಷಣೆಗಳನ್ನು ಮಾಡಲಾಯಿತು. ಈ ನಾಲ್ಕು ದೇಶಗಳನ್ನು `ಮುಕ್ತ, ತೆರೆದ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶದ ನಾಲ್ಕು ಮೂಲೆಗಳು' ಎಂದು ಬಣ್ಣಿಸಿದ ಟ್ರಂಪ್, ಪ್ರಾದೇಶಿಕ ಭದ್ರತೆ, ಆರ್ಥಿಕ ಭದ್ರತೆ ಮತ್ತು ರಾಜತಾಂತ್ರಿಕತೆಯ ವಿಷಯಗಳಲ್ಲಿ ಈ ರಾಷ್ಟ್ರಗಳು ನಿಕಟವಾಗಿ ಸಮನ್ವಯ ಸಾಧಿಸಿವೆ. ನಮ್ಮ ಆರ್ಥಿಕ ಸಹಕಾರವನ್ನು ಸಂಪೂರ್ಣವಾಗಿ ಹೊಸ ಎತ್ತರಕ್ಕೆ ಕೊಂಡೊಯ್ಯಲು ಮುಂದಿನ ವರ್ಷ ನಾವು ಮೊಟ್ಟಮೊದಲ ಕ್ವಾಡ್ ವಾಣಿಜ್ಯ ನಾಯಕರ ವೇದಿಕೆಯನ್ನು ಆಯೋಜಿಸಲಿದ್ದೇವೆ' ಎಂದು ತಿಳಿಸಿದರು.
ನಿರ್ಣಾಯಕ ಖನಿಜಗಳು ಮತ್ತೊಂದು ಪ್ರಮುಖ ಆದ್ಯತೆಯಾಗಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿಗಳಿಂದ ಹಿಡಿದು ಸೆಮಿಕಂಡಕ್ಟರ್ಗಳು ಮತ್ತು ರಕ್ಷಣಾ ಉಪಕರಣಗಳವರೆಗಿನ ವಿವಿಧ ಕ್ಷೇತ್ರಗಳಿಗೆ ಈ ಖನಿಜಗಳು ಅತ್ಯಗತ್ಯವಾಗಿವೆ. ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸಲು ಮತ್ತು ನಿರ್ದಿಷ್ಟ ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ನಾಲ್ಕು ದೇಶಗಳು ಹೊಸ ಒಪ್ಪಂದಗಳಿಗೆ ಬಂದಿವೆ ಎಂದು ಟ್ರಂಪ್ ಹೇಳಿದರು.
ಸೆಪ್ಟೆಂಬರ್ 2024ರ ನಂತರ ನಡೆದ ಕ್ವಾಡ್ ನಾಯಕರ ಮೊದಲ ಮುಖಾಮುಖಿ ಸಭೆ ಇದಾಗಿದ್ದು, ಟ್ರಂಪ್ ಅವರ ಎರಡನೇ ಅಧ್ಯಕ್ಷೀಯ ಅವಧಿಯ ಮೊದಲ ಕ್ವಾಡ್ ಸಭೆಯಾಗಿದೆ.






