ಪೌರತ್ವಕ್ಕೆ ನೇರ ರಹದಾರಿ; ಗೋಲ್ಡ್ ಕಾರ್ಡ್ ಘೋಷಿಸಿದ ಟ್ರಂಪ್

PC: screengrab/x.com/realDonaldTrump
ವಾಷಿಂಗ್ಟನ್: ಅಮೆರಿಕದ ಪೌರತ್ವ ಪಡೆಯಲು ಬುಧವಾರದಿಂದಲೇ ಜಾರಿಯಾಗುವಂತೆ ವಿಶೇಷ "ಟ್ರಂಪ್ ಗೋಲ್ಡ್ ಕಾರ್ಡ್" ಯೋಜನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಟ್ರುಥ್ ಸೋಶಿಯಲ್ ಪೋಸ್ಟ್ ನಲ್ಲಿ ಟ್ರಂಪ್ ಈ ವಿಶೇಷ ಯೋಜನೆಯನ್ನು ಘೋಷಿಸಿದ್ದು, "ಅಮೆರಿಕ ಸರ್ಕಾರದ ಟ್ರಂಪ್ ಗೋಲ್ಡ್ ಕಾರ್ಡ್ ಇಂದು ಘೋಷಣೆಯಾಗಿದೆ! ಇದು ಅರ್ಹತೆ ಹೊಂದಿದ ಎಲ್ಲ ಜನರಿಗೆ ಪೌರತ್ವಕ್ಕೆ ನೇರ ಮಾರ್ಗ. ಅಷ್ಟೊಂದು ರೋಮಾಂಚಕ! ನಮ್ಮ ಶ್ರೇಷ್ಠ ಅಮೆರಿಕನ್ ಕಂಪನಿಗಳು ತಮ್ಮ ಅಮೂಲ್ಯ ಪ್ರತಿಭೆಗಳನ್ನು ಅಂತಿಮವಾಗಿ ಉಳಿಸಿಕೊಳ್ಳಬಹುದು. ಲೈವ್ ಸೈಟ್ 30 ನಿಮಿಷಗಳಲ್ಲಿ ಮುಕ್ತವಾಗಲಿದೆ!" ಎಂದಿದ್ದಾರೆ.
ಈ ಬಗ್ಗೆ ಮತ್ತಷ್ಟು ವಿವರ ನೀಡಿರುವ ಟ್ರಂಪ್, "ಗೋಲ್ಡ್ ಕಾರ್ಡ್ ಆರಂಭ ನನಗೆ ಹಾಗೂ ದೇಶಕ್ಕೆ ಅತ್ಯಂತ ರೋಮಾಂಚಕ ಕ್ಷಣ. ಈ ಸೈಟ್ 30 ನಿಮಿಷಗಳಲ್ಲಿ ಆರಂಭವಾಗಲಿದೆ. ಎಲ್ಲ ಹಣ ಅಮೆರಿಕ ಸರ್ಕಾರಕ್ಕೆ ಹೋಗಲಿದೆ.. ಇದು ಬಹುತೇಕ ಗ್ರೀನ್ ಕಾರ್ಡ್ ನಂತಿದೆ. ಆದರೆ ಗ್ರೀನ್ ಕಾರ್ಡ್ ಗಿಂತ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ. ಕಂಪನಿಗಳು ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಕಾರ್ಡ್ ಖರೀದಿಸಿ, ಆ ವ್ಯಕ್ತಿಯನ್ನು ಅಮೆರಿಕದಲ್ಲಿ ಉಳಿಸಿಕೊಳ್ಳಬಹುದು. ಶ್ರೇಷ್ಠರನ್ನು ನಮ್ಮ ದೇಶಕ್ಕೆ ಕರೆತರಲು ಇದು ದೊಡ್ಡ ಉಡುಗೊರೆ. ಏಕೆಂದರೆ ಈಗ ಕೆಲ ಅದ್ಭುತ ವ್ಯಕ್ತಿಗಳಿದ್ದರೂ, ಅವರಿಗೆ ಇಲ್ಲಿ ನೆಲೆಸಲು ಅವಕಾಶ ನೀಡುವಂತಿಲ್ಲ" ಎಂದು ಹೇಳಿದ್ದಾರೆ.
"ನಮ್ಮ ಕಾಲೇಜುಗಳಲ್ಲಿ ಪದವಿ ಪಡೆದು ಅವರು ಭಾರತ, ಚೀನಾ ಅಥವಾ ಫ್ರಾನ್ಸ್ಗೆ ಮರಳುತ್ತಾರೆ.. ಕಂಪನಿಗಳಿಗೆ ಸಂತಸದ ವಿಚಾರ. ಆ್ಯಪಲ್ಗೆ ಅತೀವ ಸಂತಸವಾಗುತ್ತದೆ ಎಂದು ನನಗೆ ಗೊತ್ತು. ಟಿಮ್ ಕುಕ್ ಅವರಿಗಿಂತ ಹೆಚ್ಚು ಈ ಬಗ್ಗೆ ಯಾರೂ ಮಾತನಾಡಿಲ್ಲ. ಇದು ದೊಡ್ಡ ಸಮಸ್ಯೆ ಎಂದು ಅವರು ಹೇಳಿದ್ದರು. ಇನ್ನು ಮೇಲೆ ಇದು ಸಮಸ್ಯೆಯಾಗುವುದಿಲ್ಲ.. ಇನ್ನೊಂದು ಅಂಶವೆಂದರೆ ಕೋಟ್ಯಂತರ ಡಾಲರ್ ಹಣ ಅಮೆರಿಕದ ಬೊಕ್ಕಸಕ್ಕೆ ಹರಿಯುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯ ಪೂರ್ಣ ವಿವರಗಳು ಇನ್ನೂ ಅಸ್ಪಷ್ಟಾಗಿದ್ದರೂ, ವೈಯಕ್ತಿಕ ಅರ್ಜಿದಾರರು 10 ಲಕ್ಷ ಡಾಲರ್ ಗಳನ್ನು ಅಮೆರಿಕದ ಖಜಾನೆಗೆ ದೇಣಿಗೆ ನೀಡಬೇಕಾಗುತ್ತದೆ. ಮರುಪಾವತಿ ಇಲ್ಲದ 15 ಸಾವಿರ ಡಾಲರ್ ಸಂಸ್ಕರಣಾ ಶುಲ್ಕದ ಜತೆಗೆ ಕಾರ್ಪೊರೇಟ್ ಪ್ರಾಯೋಜಿತ ಅಜಿದಾರರು 20 ಲಕ್ಷ ಡಾಲರ್ ದೇಣಿಗೆ ನೀಡಬೇಕಾಗುತ್ತದೆ ಎಂದು ತಿಳಿದು ಬಂದಿದೆ.







