ಅಮೆರಿಕ | ಪ್ರತಿಭಟನೆಗಳಲ್ಲಿ ಮಾಸ್ಕ್ ಧರಿಸದಂತೆ ನಿಷೇಧ ವಿಧಿಸಿದ ಡೊನಾಲ್ಡ್ ಟ್ರಂಪ್

Photo : PTI
ಲಾಸ್ ಏಂಜಲೀಸ್: ಪ್ರತಿಭಟನೆಗಳಲ್ಲಿ ಇನ್ನು ಮುಂದೆ ಮಾಸ್ಕ್ ಧರಿಸಲು ಅವಕಾಶವಿರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಹೇಳಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಗರದಲ್ಲಿ ವಲಸಿಗರ ಪ್ರತಿಭಟನೆಗಳನ್ನು ನಿರ್ವಹಿಸುವಲ್ಲಿ ನ್ಯಾಷನಲ್ ಗಾರ್ಡ್ ಪಾತ್ರವನ್ನು ಶ್ಲಾಘಿಸಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಪ್ರತಿಭಟನೆಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳು ವಿಫಲವಾದ ಕಾರಣ ನ್ಯಾಷನಲ್ ಗಾರ್ಡ್ ನಿಯೋಜಿಸಲಾಯಿತು ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರತಿಭಟನೆಗಳಲ್ಲಿ ಇನ್ನು ಮುಂದೆ ಮಾಸ್ಕ್ ಧರಿಸಲು ಅವಕಾಶವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರನ್ನು ಪತ್ತೆ ಹಚ್ಚಲು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಸಂಸ್ಥೆಯ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಲಾಸ್ ಏಂಜಲೀಸ್ನಲ್ಲಿ ಕಳೆದ ಎರಡು ದಿನಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದೆ.





