ಗಲ್ಫ್ ನಾಯಕರ ಮನವಿಗೆ ಮಣಿದ ಟ್ರಂಪ್; ಇರಾನ್ ಮೇಲಿನ ಅಮೆರಿಕದ ದಾಳಿ ತಾತ್ಕಾಲಿಕ ಸ್ಥಗಿತ

Photo: x.com/AFpost
ವಾಷಿಂಗ್ಟನ್, ಮೇ 19: ಖತರ್, ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಾಯಕರ ಮನವಿಯ ಬಳಿಕ ಇರಾನ್ ವಿರುದ್ಧ ಅಮೆರಿಕ ಯೋಜಿಸಿದ್ದ ಮಿಲಿಟರಿ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಮಾತುಕತೆ ವಿಫಲವಾದರೆ ಪೂರ್ಣ ಪ್ರಮಾಣದ ದಾಳಿ ನಡೆಸಲು ಅಮೆರಿಕ ಸಿದ್ಧವಾಗಿದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಟ್ರೂತ್ ಸೋಶಿಯಲ್ ನಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ, ಖತರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಇರಾನ್ ಜೊತೆ ಮಾತುಕತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಾಳಿಯನ್ನು ಮುಂದೂಡಲು ಮನವಿ ಮಾಡಿದ್ದರು ಎಂದು ಟ್ರಂಪ್ ತಿಳಿಸಿದ್ದಾರೆ.
ಮಂಗಳವಾರ ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸಲು ಯೋಜಿಸಲಾಗಿತ್ತು. ಆದರೆ, ಟೆಹ್ರಾನ್ ಜೊತೆ ನಡೆಯುತ್ತಿರುವ ಮಾತುಕತೆ ಯಶಸ್ವಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಖತರ್, ಸೌದಿ ಅರೇಬಿಯಾ ಹಾಗೂ ಯುಎಇ ನಾಯಕರು ಮಧ್ಯಪ್ರವೇಶಿಸಿದ ಬಳಿಕ ದಾಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
“ಖತರ್ ಅಮೀರ್ ತಮೀಮ್ ಬಿನ್ ಹಮದ್ ಅಲ್ ಥಾನಿ, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಇರಾನ್ ಮೇಲೆ ಯೋಜಿಸಿದ್ದ ದಾಳಿಯನ್ನು ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ. ಗಂಭೀರ ಮಾತುಕತೆಗಳು ನಡೆಯುತ್ತಿವೆ. ಅಮೆರಿಕ ಹಾಗೂ ಮಧ್ಯಪ್ರಾಚ್ಯದ ರಾಷ್ಟ್ರಗಳಿಗೆ ಸ್ವೀಕಾರಾರ್ಹವಾಗುವ ಒಪ್ಪಂದ ಸಾಧ್ಯವಾಗಬಹುದು ಎಂಬುದು ಅವರ ಅಭಿಪ್ರಾಯ” ಎಂದು ಟ್ರಂಪ್ ಹೇಳಿದ್ದಾರೆ.
“ಈ ಒಪ್ಪಂದದಲ್ಲಿ ಇರಾನ್ ಗೆ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳ ಅವಕಾಶ ಇರುವುದಿಲ್ಲ. ಆದ್ದರಿಂದ, ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಜಂಟಿ ಮುಖ್ಯಸ್ಥರ ಸಮಿತಿ ಅಧ್ಯಕ್ಷ ಜನರಲ್ ಡೇನಿಯಲ್ ಕೇನ್ ಹಾಗೂ ಅಮೆರಿಕ ಮಿಲಿಟರಿಗೆ ನಿಗದಿತ ದಾಳಿಯನ್ನು ತಾತ್ಕಾಲಿಕವಾಗಿ ಕೈಬಿಡುವಂತೆ ಸೂಚಿಸಿದ್ದೇನೆ. ಆದರೆ, ಒಪ್ಪಂದ ಸಾಧ್ಯವಾಗದಿದ್ದರೆ ಕ್ಷಣಮಾತ್ರದ ಸೂಚನೆಯಲ್ಲೇ ಪೂರ್ಣ ಪ್ರಮಾಣದ ದಾಳಿ ನಡೆಸಲು ಸಿದ್ಧರಾಗಿರಲು ಆದೇಶಿಸಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟನ್ನು ಶಮನಗೊಳಿಸಲು ಇರಾನ್ ನೀಡಿದ್ದ ಶಾಂತಿ ಪ್ರಸ್ತಾವವನ್ನು ಟ್ರಂಪ್ ಆಡಳಿತ ಈಗಾಗಲೇ ತಿರಸ್ಕರಿಸಿದೆ. ಆ ಪ್ರಸ್ತಾವ ಅಮೆರಿಕದ ನಿರೀಕ್ಷೆಗಳಿಗೆ ತಕ್ಕಂತೆ ಇಲ್ಲ ಹಾಗೂ ಮಾತುಕತೆಯಲ್ಲಿ ಯಾವುದೇ ಮಹತ್ವದ ಪ್ರಗತಿಯನ್ನು ತೋರಿಸುವುದಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ‘ಆಕ್ಸಿಯೋಸ್’ ವರದಿ ಮಾಡಿದೆ.
ಇರಾನ್ನ ಪರಮಾಣು ಕಾರ್ಯಕ್ರಮದ ವಿಚಾರವಾಗಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಬೇಕು ಎಂಬುದು ಟ್ರಂಪ್ ಆಡಳಿತದ ನಿಲುವಾಗಿದ್ದರೂ, ಅಗತ್ಯ ರಿಯಾಯಿತಿಗಳಿಗೆ ಇರಾನ್ ಒಪ್ಪದಿರುವುದು ಅಮೆರಿಕದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ತನ್ನ ಹೊಸ ಪ್ರಸ್ತಾವವನ್ನು ಪಾಕಿಸ್ತಾನದ ಮಧ್ಯವರ್ತಿಗಳ ಮೂಲಕ ರವಿವಾರ ರಾತ್ರಿ ಅಮೆರಿಕಕ್ಕೆ ಕಳುಹಿಸಿದೆ ಎಂದು ವರದಿಯಾಗಿದೆ. ‘ಆಕ್ಸಿಯೋಸ್’ ಉಲ್ಲೇಖಿಸಿರುವ ಅಮೆರಿಕದ ಹಿರಿಯ ಅಧಿಕಾರಿಯ ಪ್ರಕಾರ, ಹೊಸ ಪ್ರಸ್ತಾವದಲ್ಲಿ ಹಿಂದಿನ ಕರಡುಗಳಿಗೆ ಹೋಲಿಸಿದರೆ ಹೆಚ್ಚಿನ ಬದಲಾವಣೆಗಳಿಲ್ಲ ಎಂದು ತಿಳಿದು ಬಂದಿದೆ.






