ಇರಾನ್ ಮೇಲಿನ ದಾಳಿಗಳನ್ನು ರದ್ದುಪಡಿಸಿದ ಟ್ರಂಪ್; ಒಪ್ಪಂದಕ್ಕೆ ಹಲವು ರಾಷ್ಟ್ರಗಳ ಸಮ್ಮತಿ

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್: ಇರಾನ್ ವಿರುದ್ಧ ನಿಗದಿಯಾಗಿದ್ದ ಮಿಲಿಟರಿ ದಾಳಿ ಮತ್ತು ಬಾಂಬ್ ದಾಳಿಗಳನ್ನು ರದ್ದುಪಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಘೋಷಿಸಿದ್ದಾರೆ. ಇರಾನ್ ನಾಯಕತ್ವದೊಂದಿಗೆ ನಡೆದ ಮಾತುಕತೆಗಳು ಮಹತ್ವದ ಹಂತ ತಲುಪಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಟ್ರೂತ್ ಸೋಷಿಯಲ್ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಇರಾನ್ ನಾಯಕತ್ವದ ಅತ್ಯುನ್ನತ ಮಟ್ಟದೊಂದಿಗೆ ನಡೆದಿರುವ ಮಾತುಕತೆಗಳಿಗೆ ಒಪ್ಪಿಗೆ ದೊರೆತಿರುವ ಕಾರಣ ನಿಗದಿಯಾಗಿದ್ದ ದಾಳಿಗಳನ್ನು ರದ್ದುಪಡಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
"ಇರಾನ್ನ ಉನ್ನತ ನಾಯಕತ್ವದೊಂದಿಗೆ ನಡೆದ ಮಾತುಕತೆಗಳಿಗೆ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ, ಇಂದು ಸಂಜೆ ಇರಾನ್ ವಿರುದ್ಧ ನಿಗದಿಯಾಗಿದ್ದ ದಾಳಿಗಳು ಮತ್ತು ಬಾಂಬ್ ದಾಳಿಗಳನ್ನು ರದ್ದುಪಡಿಸಿದ್ದೇನೆ" ಎಂದು ಟ್ರಂಪ್ ಹೇಳಿದ್ದಾರೆ.
ಒಪ್ಪಂದದ ಅಂತಿಮ ರೂಪುರೇಷೆ ಕುರಿತು ನಡೆದ ಚರ್ಚೆಗಳಿಗೆ ಸಂಬಂಧಿತ ರಾಷ್ಟ್ರಗಳು ಸಮ್ಮತಿ ಸೂಚಿಸಿವೆ."ಅಮೆರಿಕ, ಇಸ್ರೇಲ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಖತರ್, ಟರ್ಕಿ, ಪಾಕಿಸ್ತಾನ, ಬಹ್ರೇನ್, ಕುವೈತ್, ಜೋರ್ಡಾನ್, ಈಜಿಪ್ಟ್ ಸೇರಿದಂತೆ ಎಲ್ಲ ಪಕ್ಷಗಳು ಒಪ್ಪಂದಕ್ಕೆ ಅನುಮೋದನೆ ನೀಡಿವೆ" ಎಂದು ಅವರು ಹೇಳಿದ್ದಾರೆ.
"ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕುವವರೆಗೆ ಇರಾನ್ ವಿರುದ್ಧದ ನೌಕಾ ದಿಗ್ಬಂಧನ ಮುಂದುವರಿಯಲಿದೆ. ಒಪ್ಪಂದಕ್ಕೆ ಸಹಿ ಹಾಕುವ ಸಮಯ ಮತ್ತು ಸ್ಥಳವನ್ನು ಶೀಘ್ರದಲ್ಲೇ ಘೋಷಿಸಲಾಗುವುದು" ಎಂದು ಟ್ರಂಪ್ ತಿಳಿಸಿದ್ದಾರೆ.






