ನಾನು ಎಂಟು ಯುದ್ಧಗಳನ್ನು ನಿಲ್ಲಿಸಿದ್ದು ನೊಬೆಲ್ ಪ್ರಶಸ್ತಿಗಾಗಿ ಅಲ್ಲ: ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಭಾರತ-ಪಾಕಿಸ್ತಾನ ಸೇರಿದಂತೆ ಒಟ್ಟು ಎಂಟು ಯುದ್ಧಗಳನ್ನು ನಾನು ನಿಲ್ಲಿಸಿದ್ದು, ನಾನಿದನ್ನು ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಮಾಡಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಇಲ್ಲಿಯವರೆಗೆ ನಾನು ಭಾರತ-ಪಾಕಿಸ್ತಾನ ನಡುವಿನ ಯುದ್ಧ ಸೇರಿದಂತೆ ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಹೇಳುತ್ತಾ ಬಂದಿದ್ದ ಡೊನಾಲ್ಡ್ ಟ್ರಂಪ್, ಇದೀಗ ಆ ಸಂಖ್ಯೆಯನ್ನು ಏರಿಕೆ ಮಾಡಿದ್ದು, ಇಸ್ರೇಲ್-ಗಾಝಾ ಯುದ್ಧ ಸೇರಿದಂತೆ ಒಟ್ಟು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಸದ್ಯ ಪಾಕಿಸ್ತಾನ-ಅಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಘರ್ಷಣೆಯನ್ನೂ ನಿಲ್ಲಿಸುವ ತಮ್ಮ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.
“ನಾನು ನಿಲ್ಲಿಸಿರುವ ಎಂಟನೆಯ ಯುದ್ಧ ಇದಾಗಿದೆ. ಇದೀಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಯುದ್ಧ ನಡೆಯುತ್ತಿದೆ ಎಂದು ನಾನು ಕೇಳಲ್ಪಟ್ಟೆ. ನಾನು ಮರಳುವವರೆಗೂ ಅದನ್ನು ನಿಲ್ಲಿಸಲು ಕಾಯಬೇಕು ಎಂದು ನಾನು ಹೇಳಿದೆ. ನಾನು ಮತ್ತೊಂದು ಯುದ್ಧ ನಿಲ್ಲಿಸಲಿದ್ದೇನೆ. ನಾನು ಶಾಂತಿ ಸ್ಥಾಪಿಸುವಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾನಿದನ್ನು ನೊಬೆಲ್ ಪ್ರಶಸ್ತಿಗಾಗಿ ಮಾಡಲಿಲ್ಲ. ನಾನಿದನ್ನು ಜೀವಗಳನ್ನು ರಕ್ಷಿಸಲು ಮಾಡಿದೆ ಎಂದೂ ಅವರು ಹೇಳಿದರು.







