“ನನಗೆ ಸಾಕಷ್ಟು ಬೆದರಿಕೆಗಳು ಬರುತ್ತವೆ”: ತುರ್ಕಿಯೆಯಿಂದ ನಿರ್ಗಮನದ ವೇಳೆ ವಿಮಾನ ಬದಲಾಯಿಸಿರುವುದನ್ನು ದೃಢಪಡಿಸಿದ ಟ್ರಂಪ್

ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್ : ತುರ್ಕಿಯೆಯಲ್ಲಿ ನ್ಯಾಟೋ ಶೃಂಗಸಭೆ ಬಳಿಕ ಇರಾನ್ನಿಂದ ಹತ್ಯೆ ಬೆದರಿಕೆ ಹಿನ್ನೆಲೆ ತನ್ನನ್ನು ರಹಸ್ಯವಾಗಿ ಮತ್ತೊಂದು ವಿಮಾನಕ್ಕೆ ಸ್ಥಳಾಂತರಿಸಲಾಗಿದೆ ಎಂಬುದನ್ನು ಡೊನಾಲ್ಡ್ ಟ್ರಂಪ್ ಅವರು ದೃಢಪಡಿಸಿದ್ದಾರೆ. ಬೆದರಿಕೆಯ ಕುರಿತು ವಿವರಗಳನ್ನು ಹೇಳದ ಅಮೆರಿಕ ಅಧ್ಯಕ್ಷರು ಸೀಕ್ರೆಟ್ ಸರ್ವಿಸ್ ಹಾಗೂ ಅಮೆರಿಕ ಸೇನೆಯ ಸೂಚನೆಗಳನ್ನು ಪಾಲಿಸಿರುವುದಾಗಿ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತುರ್ಕಿಯೆಯಿಂದ ಅಮೆರಿಕಕ್ಕೆ ಮರಳುವಾಗ ನಿಗದಿಯಾಗಿದ್ದ ಏರ್ ಫೋರ್ಸ್ ಒನ್ ವಿಮಾನದಲ್ಲಿ ಪ್ರಯಾಣಿಸಿರಲಿಲ್ಲ. ಬದಲಿಗೆ, ಅವರನ್ನು ವಿಮಾನಕ್ಕೆ ಆಹಾರ ಪೂರೈಸುವ ಟ್ರಕ್ ನಲ್ಲಿ ರಹಸ್ಯವಾಗಿ ಕರೆದೊಯ್ದು C-32A ಮಿಲಿಟರಿ ವಿಮಾನದಲ್ಲಿ ಕರೆದೊಯ್ಯಲಾಗಿದೆ ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿತ್ತು.
ವಿಮಾನ ಬದಲಾವಣೆಯ ಕುರಿತು ಕೇಳಿದಾಗ ಟ್ರಂಪ್ ಅವರು ಯಾವುದೇ ನಿರ್ದಿಷ್ಟ ಬೆದರಿಕೆಯ ಬಗ್ಗೆ ವಿವರಗಳನ್ನು ನೀಡಿಲ್ಲ. ಆದರೆ, ತಾನು ಭದ್ರತಾ ಪಡೆಗಳ ಸೂಚನೆಯನ್ನು ಪಾಲಿಸಿರುವುದಾಗಿ ಹೇಳಿದರು.
“ನಾನು ಸೀಕ್ರೆಟ್ ಸರ್ವಿಸ್ ಮತ್ತು ಸೇನೆಯ ಸೂಚನೆಗಳನ್ನು ಪಾಲಿಸುತ್ತೇನೆ. ಅವರು ನನಗೆ ಬೇರೆ ವಿಮಾನದಲ್ಲಿ ತೆರಳುವಂತೆ ಸೂಚಿಸಿದರು. ಅವರು ಹೇಳಿದಂತೆ ನಾನು ಮಾಡುತ್ತೇನೆ. ಅಲ್ಲಿ ಬೆದರಿಕೆ ಇತ್ತು ಎಂದು ನಾನು ಭಾವಿಸುತ್ತೇನೆ. ಅದರ ಬಗ್ಗೆ ನಾನು ಹೆಚ್ಚು ವಿಚಾರಿಸಲಿಲ್ಲ. ನನಗೆ ಸಾಕಷ್ಟು ಬೆದರಿಕೆಗಳು ಬರುತ್ತವೆ” ಎಂದು ಟ್ರಂಪ್ ಹೇಳಿದ್ದಾರೆ.
ವಾಸ್ತವವಾಗಿ ನಾನು ಪ್ರಯಾಣಿಸಿದ ವಿಮಾನವೇ ಹೆಚ್ಚಿನ ಅಪಾಯದಲ್ಲಿತ್ತು ಎಂದು ನನಗನ್ನಿಸುತ್ತದೆ. ಏಕೆಂದರೆ ಅವರು ಗುರಿಯಾಗಿಸಲು ಹೆಚ್ಚು ಸಾಧ್ಯತೆ ಇದ್ದ ವಿಮಾನವೇ ಅದಾಗಿತ್ತು, ಆದ್ದರಿಂದಲೇ ಅದು ಹೆಚ್ಚು ಅಪಾಯದಲ್ಲಿತ್ತು ಎಂದು ಭಾವಿಸುತ್ತೇನೆ ಎಂದು ಹೇಳಿದರು.
ನಿಮಗೆ ತಿಳಿಯದೆ ಹಲವು ಬೆದರಿಕೆಗಳು ನನಗೆ ಬರುತ್ತವೆ. ಪ್ರಭಾವಶಾಲಿ ಅಧ್ಯಕ್ಷರಿಗೆ ಹಲವು ಬೆದರಿಕೆಗಳು ಇರುತ್ತವೆ. ಪ್ರಭಾವಶಾಲಿಯಲ್ಲದ ಅಧ್ಯಕ್ಷರಿಗೆ ಬೆದರಿಕೆಗಳು ಬರುವುದಿಲ್ಲ. ಬಹುಶಃ ನಾನು ಅತ್ಯಂತ ಪ್ರಭಾವಶಾಲಿ ಅಧ್ಯಕ್ಷ ಎಂದು ಭಾವಿಸುತ್ತೇನೆ. ಈ ಬೆದರಿಕೆಗಳ ಬಗ್ಗೆ ನನಗೆ ಯಾವುದೇ ರೀತಿಯ ವಿಶೇಷ ಕಳವಳವಿಲ್ಲ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ. ವಿಷಯ ಏನೇ ಇರಲಿ, ನನ್ನ ಮನೋಭಾವ ನಿಮಗೆ ಗೊತ್ತಿದೆಯಲ್ಲವೇ? ಏನೇ ಆಗಲಿ ಎಂದು ಟ್ರಂಪ್ ಹೇಳಿದರು.






