ಇರಾನ್ ಯುದ್ಧದ ಸಂದರ್ಭ ತಟಸ್ಥರಾಗಿದ್ದಕ್ಕಾಗಿ ಚೀನಾ, ರಶ್ಯಕ್ಕೆ ಟ್ರಂಪ್ ಅಭಿನಂದನೆ

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಜೂ.18: ಇರಾನ್ ಜೊತೆಗಿನ ಅಮೆರಿಕದ ಯುದ್ಧದ ಸಮಯದಲ್ಲಿ ತಟಸ್ಥರಾಗುಳಿದಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಮೆರಿಕದ ಮಿಲಿಟರಿ ಕಾರ್ಯಾಚರಣೆ ಮತ್ತು ಅದರ ನಂತರದ ಶಾಂತಿ ಪ್ರಯತ್ನಗಳನ್ನು ಜಟಿಲಗೊಳಿಸಬಹುದಾದ ಕ್ರಮಗಳಿಂದ ಇಬ್ಬರೂ ನಾಯಕರು ಉದ್ದೇಶಪೂರ್ವಕವಾಗಿ ದೂರವಿದ್ದರು ಎಂದು ಟ್ರಂಪ್ ಹೇಳಿದ್ದಾರೆ.
ಫ್ರಾನ್ಸ್ನಲ್ಲಿ ನಡೆದ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ `ನಾನು ಚೀನಾ ಮತ್ತು ಅಧ್ಯಕ್ಷ ಕ್ಸಿ ಜಿಂಪಿಂಗ್ಗೆ, ರಶ್ಯದ ಅಧ್ಯಕ್ಷ ಪುಟಿನ್ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಸಂಪೂರ್ಣವಾಗಿ ತಟಸ್ಥರಾಗುಳಿದರು.
ಸಂಘರ್ಷದ ಸಮಯದಲ್ಲಿ ಇರಾನ್ಗೆ ಯಾವುದೇ ಶಸ್ತ್ರಾಸ್ತ್ರಗಳನ್ನು ಅಥವಾ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳನ್ನು ಕಳುಹಿಸದಂತೆ ಚೀನಾ ತಡೆದಿದೆ. ಅವರು ಆರು ಯುದ್ಧನೌಕೆಗಳ ಬೆಂಗಾವಲಿನೊಂದಿಗೆ ತೈಲ ಹಡಗನ್ನು ಕಳುಹಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ ಮತ್ತು ಬಹುಶಃ ಈ ಸಮಸ್ಯೆಯನ್ನು ಬಗೆಹರಿಸಲು ಅವರು ಸಹಾಯ ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದು ಟ್ರಂಪ್ ಹೇಳಿದ್ದಾರೆ.




