ಅಮೆರಿಕ | ಭಾರತದಿಂದ ರಫ್ತಾಗುವ ಅಕ್ಕಿಗೆ ಹೊಸ ಸುಂಕದ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಭಾರತೀಯ ಅಕ್ಕಿ ಆಮದುಗಳ ಮೇಲೆ ಹೊಸ ಸುಂಕಗಳನ್ನು ವಿಧಿಸುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭಾರತ ಸೇರಿದಂತೆ ಹಲವಾರು ದೇಶಗಳು ಅಕ್ಕಿಯನ್ನು ಮತ್ತು ಕೃಷಿ ಉತ್ಪನ್ನಗಳನ್ನು ತಂದು ಅಮೆರಿಕದ ಮಾರುಕಟ್ಟೆಗೆ ಸುರಿಯುತ್ತಿವೆ ಎಂದು ಅಮೆರಿಕದ ರೈತರು ಆರೋಪಿಸಿರುವ ಹಿನ್ನೆಲೆಯಲ್ಲಿ ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ.
ಸಬ್ಸಿಡಿ ಪಡೆದ ಅಗ್ಗದ ಅಕ್ಕಿ ಅಮೆರಿಕದ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿ, ದೇಶೀಯ ಬೆಲೆಗಳು ಕುಸಿಯಲು ಕಾರಣವಾಗುತ್ತಿದೆ ಎಂಬ ಆರೋಪದ ನಡುವೆಯೇ,, ಟ್ರಂಪ್ ರೈತರೊಂದಿಗೆ ನಡೆದ ದುಂಡುಮೇಜಿನ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ. ರೈತರಿಗೆ 12 ಬಿಲಿಯನ್ ಅಮೆರಿಕನ್ ಡಾಲರ್ ನೆರವು ಪ್ಯಾಕೇಜ್ ಘೋಷಣೆ ಸಂದರ್ಭದಲ್ಲಿ ಮಾತನಾಡಿದ ಅವರು, “ಕೆಲ ದೇಶಗಳು ಕಡಿಮೆ ಬೆಲೆಗೆ ಅಕ್ಕಿ ಸುರಿದು ನಮ್ಮ ಮಾರುಕಟ್ಟೆಯನ್ನು ಕೆಡಿಸುತ್ತಿವೆ. ಸರ್ಕಾರ ಈ ಬಗ್ಗೆ ತನಿಖೆ ಮಾಡಲಿದೆ” ಎಂದರು.
ಈ ಸಭೆಯಲ್ಲಿ ಭಾಗವಹಿಸಿದ ಲೂಸಿಯಾನಾದ ‘ಕೆನಡಿ ರೈಸ್ ಮಿಲ್’ ಸಿಇಒ ಮೆರಿಲ್ ಕೆನಡಿ, ಭಾರತ, ಥೈಲ್ಯಾಂಡ್ ಮತ್ತು ಚೀನಾ ದೇಶೀಯ ಮಾರುಕಟ್ಟೆ ಕುಸಿಯಲು ಕಾರಣವಾದ ದೇಶಗಳು ಎಂದು ಟ್ರಂಪ್ ರಿಗೆ ಹೇಳಿದರು. ಈ ದೇಶಗಳ ಸಬ್ಸಿಡಿ ನೀತಿಗಳು ಅಮೆರಿಕದ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿವೆ. ಇದರಿಂದ ದಕ್ಷಿಣ ಅಮೆರಿಕದಲ್ಲಿ ನಾವು ನಿಜವಾಗಿಯೂ ಕಷ್ಟಪಡುತ್ತಿದ್ದೇವೆ, ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, “ಅವರು ಕೃಷಿ ಉತ್ಪನ್ನಗಳನ್ನು ತಂದು ಇಲ್ಲಿಗೆ ಡಂಪ್ ಮಾಡಬಾರದು. ನಮ್ಮ ದೇಶದ ರೈತರ ಹಿತ ಕಾಪಾಡಲು ಆ ದೇಶಗಳ ಮೇಲೆ ನಾವು ಇನ್ನೂ ಹೆಚ್ಚಿನ ಸುಂಕ ವಿಧಿಸಲು ಸಿದ್ಧ. ಆ ದೇಶಗಳ ಪಟ್ಟಿಯನ್ನು ಬರೆಯಿರಿ” ಎಂದು ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರಿಗೆ ಸೂಚಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಬೆಸೆಂಟ್ ಭಾರತ, ಥೈಲ್ಯಾಂಡ್, ಚೀನಾಗಳು ದೇಶೀಯ ಮಾರುಕಟ್ಟೆ ಅಸ್ಥಿರತೆಗೆ ಕಾರಣ ಎಂದು ಹೆಸರಿಸಿದರು.
ಟ್ರಂಪ್ ಕೆನಡಾದಿಂದ ಆಮದು ಮಾಡುತ್ತಿರುವ ರಸಗೊಬ್ಬರಗಳ ಮೇಲೂ ಕಠಿಣ ಕ್ರಮಗಳ ಸುಳಿವು ನೀಡಿದ್ದು, “ಅಮೆರಿಕದಲ್ಲಿ ಆಂತರಿಕ ಉತ್ಪಾದನೆಗೆ ಉತ್ತಮ ಅವಕಾಶ ನೀಡಲು, ಅಗತ್ಯವಿದ್ದರೆ ಕಠಿಣ ಸುಂಕಗಳನ್ನು ಜಾರಿ ಮಾಡಲಾಗುವುದು” ಎಂದು ಹೇಳಿದರು.
ಅಮೆರಿಕಾ–ಭಾರತ ವ್ಯಾಪಾರ ಮಾತುಕತೆಗಳು ಪುನರಾರಂಭ:
ವ್ಯಾಪಾರ ಸಂಬಂಧಗಳು ಉದ್ವಿಗ್ನತೆಯಲ್ಲಿರುವ ಸಂದರ್ಭದಲ್ಲೇ, ಅಮೆರಿಕ ವ್ಯಾಪಾರ ಪ್ರತಿನಿಧಿ ಕಚೇರಿಯ (USTR) ಉಪ ಮುಖ್ಯಸ್ಥ ರಿಕ್ ಸ್ವಿಟ್ಜರ್ ನೇತೃತ್ವದ ನಿಯೋಗ ಈ ವಾರ ಭಾರತಕ್ಕೆ ಭೇಟಿ ನೀಡಿ ಸುಂಕ ಮತ್ತು ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (BTA) ಕುರಿತ ಮಾತುಕತೆಗಳನ್ನು ಮುಂದುವರಿಸಲಿದ್ದಾರೆ. ಡಿಸೆಂಬರ್ 10–11 ರಂದು ಈ ಸಭೆಗಳು ನಡೆಯಲಿದ್ದು, ಭಾರತದ ಪರವಾಗಿ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ನೇತೃತ್ವ ವಹಿಸಲಿದ್ದಾರೆ.
ಅಗರ್ವಾಲ್ ಇತ್ತೀಚೆಗೆ ನಡೆದ ಎಫ್ಐಸಿಸಿಐ ಸಭೆಯಲ್ಲಿ, “ವರ್ಷಾಂತ್ಯದೊಳಗೆ ಬಿಟಿಎ ಮೊದಲ ಹಂತದ ಒಪ್ಪಂದ ಸಾಧ್ಯ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.







