ಹಾರ್ಮುಝ್ ಜಲಸಂಧಿ ಅಮೆರಿಕದ ನೂತನ ಪ್ರಾಂತ್ಯವೆಂದು ಘೋಷಿಸಿದ ಡೊನಾಲ್ಡ್ ಟ್ರಂಪ್ : ಸಾಮಾಜಿಕ ಜಾಲತಾಣದಲ್ಲಿ ಜಲಸಂಧಿಯ ‘ನೂತನ ನಕ್ಷೆ’ ಪೋಸ್ಟ್ ಮಾಡಿದ ಅಮೆರಿಕ ಅಧ್ಯಕ್ಷ

ಡೊನಾಲ್ಡ್ ಟ್ರಂಪ್ | Photo Credit : AP
ಟೆಹರಾನ್,ಆ.11: ಇರಾನ್ ಹಾಗೂ ಅಮೆರಿಕ ನಡುವಿನ ಮಧ್ಯಂತರ ಒಪ್ಪಂದವು ಸೋಮವಾರ ಕೊನೆಗೊಂಡಿರುವಂತೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಝ್ ಜಲಸಂಧಿಯನ್ನು ಅಮೆರಿಕದ ನೂತನ ಪ್ರಾಂತ್ಯವೆಂದು ಬಿಂಬಿಸುವ ಪೋಸ್ಟ್ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾಗಿರುವ ಹಾರ್ಮುಝ್ ಜಲಸಂಧಿಯ ಮೇಲೆ ಅಮೆರಿಕವು ಈಗ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆಯೆಂದು ಈ ಮೊದಲು ಹೇಳಿಕೊಂಡಿದ್ದ ಅವರು ಇದೀಗ ಈ ನಕ್ಷೆಯನ್ನು ತನ್ನ ಸಾಮಾಜಿಕ ಜಾಲತಾಣ ಟ್ರೂಥ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೌಕಾಯಾನ ದಿಗ್ಭಂಧನ ಸೇರಿದಂತೆ ಇರಾನ್ ವಿರುದ್ಧ ವಿಧಿಸಲಾಗಿರುವ ಎಲ್ಲಾ ನಿರ್ಬಂಧಗಳನ್ನು ರದ್ದುಪಡಿಸುವವರೆಗೂ ಹಾರ್ಮುಝ್ ಜಲಸಂಧಿ ಮುಚ್ಚಲ್ಪಟ್ಟಿರುವುದು ಎಂದು ಇರಾನ್ನ ಉನ್ನತ ಸಂಧಾನಕಾರರಲ್ಲೊಬ್ಬರಾದ ಮೊಹಮ್ಮದ್ ಬಾಘೇರ್ ಗಾಲಿಬಾಫ್ ಅವರು ಹೇಳಿಕೆ ನೀಡಿದ ಕೆಲವೇ ತಾಸುಗಳ ಬಳಿಕ ಟ್ರಂಪ್ ಈ ಪೋಸ್ಟ್ ಪ್ರಕಟಿಸಿದ್ದಾರೆ.
ತಿಳುವಳಿಕಾ ಒಪ್ಪಂದದಲ್ಲಿ ನಿರ್ದಿಷ್ಟ ಪಡಿಸಲಾದ ಅಮೆರಿಕದ ಬದ್ಧತೆಗಳನ್ನು ಜಾರಿಗೊಳಿಸುವ ತನಕ ಹಾರ್ಮುಝ್ ಜಲಸಂಧಿಯನ್ನು ತೆರೆಯಲಾಗುವುದಿಲ್ಲವೆಂದು ತಾನು ಸ್ಪಷ್ಟವಾಗಿ ಹೇಳಬಯಸುವುದಾಗಿ ಗಾಲಿಬಾಫ್ ಅವರು ಇರಾನ್ ಸರಕಾರಿ ಸ್ವಾಮ್ಯದ ಟಿವಿ ಜಾಲದಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದ್ದರು.
ನೌಕಾಯಾನ ನಿಷೇಧವನ್ನು, ತೈಲ ಸಾಗಾಟ ನಿರ್ಬಂಧವನ್ನು ಹಾಗೂ ವಿದೇಶದಲ್ಲಿರುವ ಇರಾನಿ ಸಂಪತ್ತುಗಳ ಮೇಲಿನ ಮುಟ್ಟುಗೋಲನ್ನು ತೆರವುಗೊಳಿಸುವುದನ್ನು ಇರಾನ್ ಬಯಸುತ್ತಿದೆ. ಕಳೆದ ಜೂನ್ನಲ್ಲಿ ಅಮೆರಿಕ-ಇರಾನ್ ನಡುವೆ ಏರ್ಪಟ್ಟ ಕದನವಿರಾಮ ಒಪ್ಪಂದದಲ್ಲಿ ಈ ಎಲ್ಲಾ ಬೇಡಿಕೆಗಳು ಒಳಗೊಂಡಿದ್ದವು ಎಂದು ಇರಾನ್ ಹೇಳಿಕೊಂಡಿದೆ.
ಹಾರ್ಮುಝ್ ಜಲಸಂಧಿಯು ಜಗತ್ತಿ ಅತ್ಯಂತ ಮಹತ್ವದ ಇಂಧನ ಕಾರಿಡಾರ್ ಆಗಿದ್ದು, ಅದು ಪರ್ಶಿಯನ್ ಕೊಲ್ಲಿ ಜೊತೆ ಒಮನ್ಕೊಲ್ಲಿ ಹಾಗೂ ಅರಬ್ಬಿ ಸಮುದ್ರವನ್ನು ಸಂಪರ್ಕಿಸುತ್ತದೆ.
ಯುದ್ಧ ಆರಂಭಗೊಂಡಾಗಿನಿಂದ ಇರಾನ್ ಹಾರ್ಮುಝ್ ಮೇಲೆ ನಿಯಂತ್ರಣವನ್ನು ಸಾಧಿಸಿದೆ. ಈ ಜಲಸಂಧಿಯಲ್ಲಿ ಹಾದುಹೋಗಲು ನೌಕೆಗಳು ಇರಾನ್ನ ಅನುಮತಿಯನ್ನು ಪಡೆಯಬೇಕಾಗಿತ್ತು ಹಾಗೂ ಸಂಚಾರ ಶುಲ್ಕವನ್ನು ಪಾವತಿಸಬೇಕಾಗಿತ್ತು.






