ಹಾರ್ವರ್ಡ್ ನಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ನಿರ್ಬಂಧವನ್ನು ಸಮರ್ಥಿಸಿಕೊಂಡ ಟ್ರಂಪ್

Photo | NDTV
ವಾಷಿಂಗ್ಟನ್: ಹಾರ್ವರ್ಡ್ ವಿವಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ನಿರ್ಬಂಧಿಸುವ ಸರಕಾರದ ಕ್ರಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಸಮರ್ಥಿಸಿಕೊಂಡಿದ್ದಾರೆ.
`ತಮ್ಮ ವಿದ್ಯಾರ್ಥಿಗಳಲ್ಲಿ ಸುಮಾರು 31% ಪ್ರತಿಶತ ವಿದೇಶಿ ದೇಶಗಳಿಂದ ಬಂದವರು ಎಂದು ಹಾರ್ವರ್ಡ್ ಏಕೆ ಹೇಳುತ್ತಿಲ್ಲ ? ಈ ದೇಶಗಳು (ಇದರಲ್ಲಿ ಹಲವು ದೇಶಗಳು ಅಮೆರಿಕದೊಂದಿಗೆ ಸ್ನೇಹಪರವಾಗಿಲ್ಲ) ತಮ್ಮ ವಿದ್ಯಾರ್ಥಿಯ ಶಿಕ್ಷಣದ ಬಗ್ಗೆ ಏನನ್ನೂ ಪಾವತಿಸುವುದಿಲ್ಲ ಅಥವಾ ಪಾವತಿಸಲು ಬಯಸುವುದೂ ಇಲ್ಲ. ನಾವು ಹಾರ್ವರ್ಡ್ಗೆ ಕೋಟ್ಯಾಂತರ ಡಾಲರ್ಗಳನ್ನು ನೀಡುತ್ತಿರುವುದರಿಂದ ಇಂತಹ ವಿದ್ಯಾರ್ಥಿಗಳು ಯಾರು ಎಂಬುದನ್ನು ತಿಳಿದುಕೊಳ್ಳಲು ನಾವು ಬಯಸಿದ್ದೇವೆ. ಆದರೆ ಹಾರ್ವರ್ಡ್ ಇದಕ್ಕೆ ಮುಂದೆ ಬರುತ್ತಿಲ್ಲ' ಎಂದು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ `ಟ್ರುಥ್ ಸೋಷಿಯಲ್'ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಈ ಮಧ್ಯೆ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳ ದಾಖಲಾತಿಯನ್ನು ನಿರ್ಬಂಧಿಸುವ ಟ್ರಂಪ್ ಆಡಳಿತದ ಕ್ರಮಕ್ಕೆ ಅಮೆರಿಕದ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಆಲಿಸನ್ ಬರೋಸ್ ಶುಕ್ರವಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ.





