ಜಾಗತಿಕ ತೈಲ ಮಾರುಕಟ್ಟೆಯ ಸ್ಥಿರತೆಗಾಗಿ ರಶ್ಯದಿಂದ ಡೀಸೆಲ್ ಖರೀದಿ: ಟ್ರಂಪ್ ಸಮರ್ಥನೆ

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಅ. 14: ವ್ಯಾಪಕ ವಿರೋಧದ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಶ್ಯದೊಂದಿಗೆ ಡೀಸೆಲ್ ಖರೀದಿ ಒಪ್ಪಂದ ಮಾಡಿಕೊಂಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಮಾಸ್ಕೋದ ತೈಲಾಗಾರಗಳಿಂದ ಅಮೆರಿಕಕ್ಕೆ ನೇರವಾಗಿ ಇಂಧನ ಪೂರೈಕೆಯಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರಗಳು ಸ್ಥಿರಗೊಳ್ಳುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ವಾಶಿಂಗ್ಟನ್ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 9ರಂದು ಅಮೆರಿಕ ಹಾಗೂ ರಶ್ಯ ನಡುವೆ ಏರ್ಪಟ್ಟ ಡೀಸೆಲ್ ಖರೀದಿ ಒಪ್ಪಂದದಿಂದಾಗಿ ರಶ್ಯವು ಅಮೆರಿಕಕ್ಕೆ 3 ಲಕ್ಷ ಟನ್ಗೂ ಅಧಿಕ ಪ್ರಮಾಣದ ಡೀಸೆಲ್ ಪೂರೈಸಲು ಅವಕಾಶ ದೊರೆತಿತ್ತು ಎಂದು ತಿಳಿಸಿದರು. ನವೆಂಬರ್ನಲ್ಲಿ ಅಮೆರಿಕವು ರಶ್ಯದಿಂದ ಹೆಚ್ಚುವರಿಯಾಗಿ 5 ಲಕ್ಷ ಟನ್ ಹಾಗೂ ಆನಂತರ 10 ದಶಲಕ್ಷ ಟನ್ ಡೀಸೆಲ್ ಖರೀದಿಸಿತ್ತು. 2027ರ ಏಪ್ರಿಲ್ 7ರವರೆಗೆ ರಶ್ಯದಿಂದ ಡೀಸೆಲ್ ಖರೀದಿಸುವುದಕ್ಕಾಗಿ ಅಮೆರಿಕದ ಹಣಕಾಸು ಇಲಾಖೆಯು ತಾತ್ಕಾಲಿಕ ಪರವಾನಗಿ ಜಾರಿಗೊಳಿಸುವ ಮೂಲಕ ಮಾಸ್ಕೋ ಮೇಲೆ ವಿಧಿಸಿದ್ದ ವಾಣಿಜ್ಯ ನಿರ್ಬಂಧಗಳನ್ನು ಸಡಿಲಿಸಿತ್ತು.
ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕ ಕಾಂಗ್ರೆಸ್ನ ಮಧ್ಯಂತರ ಚುನಾವಣೆಗೆ ಮುನ್ನ ಟ್ರಂಪ್ ಆಡಳಿತವು ಈ ಕ್ರಮ ಕೈಗೊಂಡಿದೆ. ಇರಾನ್ ಯುದ್ಧದಿಂದಾಗಿ ಮಧ್ಯಪ್ರಾಚ್ಯದಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಗಗನಕ್ಕೇರಿರುವ ತೈಲ ಬೆಲೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಆಡಳಿತ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ‘ಈ ಒಪ್ಪಂದವು ಅಮೆರಿಕಕ್ಕಾಗಿ ಅಲ್ಲ. ಇಡೀ ಜಾಗತಿಕ ಮಾರುಕಟ್ಟೆಗೆ ಪ್ರಯೋಜನವಾಗಲಿದೆ’ ಎಂದು ಟ್ರಂಪ್ ಅವರು ವಾಶಿಂಗ್ಟನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
► ಅಮೆರಿಕದ ಸಂಸದರಿಂದ ತೀವ್ರ ವಿರೋಧ
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಶ್ಯದೊಂದಿಗೆ ಮಾಡಿಕೊಂಡಿರುವ ಡೀಸೆಲ್ ಖರೀದಿ ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಡೆಮಾಕ್ರಾಟ್ ಹಾಗೂ ರಿಪಬ್ಲಿಕನ್ ಸಂಸದರನ್ನು ಒಳಗೊಂಡ ಗುಂಪೊಂದು ಟ್ರಂಪ್ ಅವರಿಗೆ ಪತ್ರ ಬರೆದು, ಕೂಡಲೇ ಈ ಒಪ್ಪಂದವನ್ನು ರದ್ದುಪಡಿಸುವಂತೆ ಆಗ್ರಹಿಸಿದೆ. ಈ ಒಪ್ಪಂದವು ನಮ್ಮ ವಿರೋಧಿಗೆ ನೀಡುವ ಕೊಡುಗೆಯಾಗಿದೆ ಹಾಗೂ ನಮ್ಮ ಮಿತ್ರರಿಗೆ ಬಗೆದ ದ್ರೋಹವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಇಂಧನದ ವೆಚ್ಚವನ್ನು ಕಡಿಮೆಗೊಳಿಸಬೇಕಾದ ಅಗತ್ಯವಿದೆಯಾದರೂ, ಜಾಗತಿಕ ಮಾರುಕಟ್ಟೆಯಲ್ಲಿ ರಶ್ಯದ ಡೀಸೆಲ್ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಅಮೆರಿಕದ ಗ್ರಾಹಕರಿಗೆ ದೊರೆಯುವ ನಿರಾಳತೆ ತೀರಾ ನಗಣ್ಯ ಎಂದು ಅವರು ಹೇಳಿದ್ದಾರೆ. ಅದರ ಬದಲು, ಈ ತೈಲ ವ್ಯವಹಾರದಿಂದ ದೊರೆಯುವ ಆದಾಯವು ರಶ್ಯಕ್ಕೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೆಚ್ಚಿನ ಶಕ್ತಿಯನ್ನು ತುಂಬುತ್ತದೆ ಹಾಗೂ ಚೀನಾ, ಇರಾನ್ ಮತ್ತು ಉತ್ತರ ಕೊರಿಯಾದೊಂದಿಗಿನ ಅದರ ಭದ್ರತಾ ಬಾಂಧವ್ಯಗಳನ್ನು ಬಲಪಡಿಸಲಿದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.






