ವಿದೇಶಿ ಉದ್ಯೋಗಿಗಳಿಗೆ ಎಚ್-1ಬಿ ವೀಸಾ: ಟ್ರಂಪ್ ಸಮರ್ಥನೆ

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ನ.12: ಎಚ್-1ಬಿ ವೀಸಾ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದು ಅಮೆರಿಕ ದೇಶೀಯವಾಗಿ ನಿರ್ಣಾಯಕ ಉದ್ಯೋಗಗಳನ್ನು ತುಂಬಲು ಅಗತ್ಯವಿರುವ ಪ್ರತಿಭೆಗಳನ್ನು ಹೊಂದಿಲ್ಲ ಎಂದಿದ್ದಾರೆ.
`ಫಾಕ್ಸ್ ನ್ಯೂಸ್' ಜೊತೆಗಿನ ಸಂದರ್ಶನದಲ್ಲಿ `ಎಚ್-1ಬಿ ವೀಸಾ ಯೋಜನೆಯು ಅಮೆರಿಕನ್ ಉದ್ಯೋಗಿಗಳಿಗೆ ವೇತನವನ್ನು ಕುಗ್ಗಿಸುತ್ತದೆ ಎಂಬ ಕಳವಳಗಳ ನಡುವೆ ಎಚ್-1ಬಿ ವೀಸಾಗಳನ್ನು ಕಡಿತಗೊಳಿಸಲು ನಿಮ್ಮ ಆಡಳಿತ ಯೋಜಿಸುತ್ತಿದೆಯೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ` ನಾನು ಒಪ್ಪುತ್ತೇನೆ. ಆದರೆ ನೀವು ಪ್ರತಿಭೆಗಳನ್ನು ಕರೆತರಬೇಕಾಗುತ್ತದೆ' ಎಂದರು.
ʼಅಮೆರಿಕದಲ್ಲಿ ಸಾಕಷ್ಟು ಪ್ರತಿಭಾವಂತ ಜನರಿದ್ದಾರೆ' ಎಂಬ ಸಂದರ್ಶಕರ ಹೇಳಿಕೆಗೆ ಟ್ರಂಪ್ `ಇಲ್ಲ, ಇಲ್ಲಿ ಕೆಲವು ಪ್ರತಿಭೆಗಳನ್ನು ನಾವು ಹೊಂದಿಲ್ಲ. ಕೆಲವು ಜನರು ಕಲಿಯಬೇಕಾಗುತ್ತದೆ. ನಿರುದ್ಯೋಗಿಗಳನ್ನು ಕರೆದು `ನಿನ್ನನ್ನು ಕ್ಷಿಪಣಿ ತಯಾರಿಸುವ ಕಾರ್ಖಾನೆಯಲ್ಲಿ ಕೆಲಸಕ್ಕೆ ಆಯ್ಕೆ ಮಾಡಿದ್ದೇನೆ' ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಸೆಪ್ಟಂಬರ್ ನಲ್ಲಿ ಜಾರ್ಜಿಯಾದಲ್ಲಿ ಹ್ಯುಂಡೈ ಕಾರ್ಖಾನೆಯ ಮೇಲೆ ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆ ನಡೆಸಿದ ದಾಳಿಯ ಸಂದರ್ಭ ವಲಸೆ ವಿಷಯಕ್ಕೆ ಸಂಬಂಧಿಸಿ ನೂರಕ್ಕೂ ಹೆಚ್ಚು ದಕ್ಷಿಣ ಕೊರಿಯಾದ ಪ್ರಜೆಗಳನ್ನು ಬಂಧಿಸಿರುವ ವರದಿಯನ್ನು ಉಲ್ಲೇಖಿಸಿದ ಟ್ರಂಪ್ ` ನುರಿತ ವಿದೇಶಿ ಉದ್ಯೋಗಿಗಳ ಮೇಲಿನ ಅಮೆರಿಕದ ಅವಲಂಬನೆಗೆ ಈ ಘಟನೆ ನಿದರ್ಶನವಾಗಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.







