ಇರಾನ್ ಜೊತೆ ಶಾಂತಿ ಮಾತುಕತೆ ವರದಿ ನಿರಾಕರಿಸಿದ ಟ್ರಂಪ್
ವ್ಯಾನ್ಸ್ ಪತ್ರ ಕಳುಹಿಸಿರುವ ವರದಿಯನ್ನು ಪರೋಕ್ಷವಾಗಿ ತಳ್ಳಿಹಾಕಿದ ಅಮೆರಿಕ ಅಧ್ಯಕ್ಷ

Photo :PTI
ವಾಷಿಂಗ್ಟನ್: ಇರಾನ್ ಜೊತೆ ಶಾಂತಿ ಮಾತುಕತೆ ಆರಂಭಿಸಲು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರಿಗೆ ಸೂಚನೆ ನೀಡಿರುವುದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ. ಇರಾನ್ ಗೆ ವೈದ್ಯಕೀಯ ಸಾಮಗ್ರಿಗಳ ಅಗತ್ಯವಿದ್ದು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನೆರವಾಗಲು ಅವುಗಳನ್ನು ಪೂರೈಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
'ಇರಾನ್ ಗೆ ವೈದ್ಯಕೀಯ ಸಾಮಗ್ರಿಗಳ ಅಗತ್ಯವಿದೆ. ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ನೆರವಾಗಲು ಆ ದೇಶ ಮೂಲತಃ ವೈದ್ಯಕೀಯ ಸಾಮಗ್ರಿಗಳನ್ನು ಪಡೆಯುತ್ತಿದೆ’ ಎಂದು ಜಂಟಿ ನೆಲೆ ಆಂಡ್ರ್ಯೂಸ್ ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಟ್ರಂಪ್ ಉತ್ತರಿಸಿದ್ದಾರೆ. ಇರಾನ್ ಜೊತೆ ಶಾಂತಿ ಮಾತುಕತೆ ಆರಂಭಿಸಲು ವ್ಯಾನ್ಸ್ ಅವರಿಗೆ ಸೂಚನೆ ನೀಡಿದ್ದೀರಾ ಎಂಬ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಶಾಂತಿ ಮಾತುಕತೆಗಳನ್ನು ಪುನರಾರಂಭಿಸುವ ಪ್ರಯತ್ನಕ್ಕೆ ಸಂಬಂಧಿಸಿದಂತೆ ಟ್ರಂಪ್ ಅವರ ಸೂಚನೆಯ ಮೇರೆಗೆ ವ್ಯಾನ್ಸ್ ಅವರು ಇರಾನ್ ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಜೈ ಅವರಿಗೆ ಪತ್ರ ಕಳುಹಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಈ ಹಿಂದೆ ವರದಿ ಮಾಡಿತ್ತು. ಅಮೆರಿಕದ ಅಧಿಕಾರಿಗಳು ಮತ್ತು ಈ ಬೆಳವಣಿಗೆಯ ಬಗ್ಗೆ ಮಾಹಿತಿ ಹೊಂದಿರುವ ವ್ಯಕ್ತಿಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಪ್ರಕಟಿಸಿತ್ತು.




