ಮಿಲಿಟರಿ ಪುನರ್ರಚನೆಗೆ ತಯಾರಿ: ಪೆಂಟಗಾನ್ಗೆ ಟ್ರಂಪ್ ನಿರ್ದೇಶನ

ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್, ಸೆ.4: ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್, ರಶ್ಯದ ವ್ಲಾದಿಮಿರ್ ಪುಟಿನ್ ಮತ್ತು ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಚೀನಾದಲ್ಲಿ ಜೊತೆಯಾಗಿ ಕಾಣಿಸಿಕೊಂಡ ಬೆನ್ನಿಗೇ `ಅಗತ್ಯಬಿದ್ದರೆ ಚೀನಾ, ರಶ್ಯವನ್ನು ತಡೆಯಲು ಸಿದ್ಧವಿರುವಂತೆ' ಪೆಂಟಗಾನ್ಗೆ(ಅಮೆರಿಕ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದು ಇದು ಅಮೆರಿಕದ ಸಶಸ್ತ್ರ ಪಡೆಗಳ ದೊಡ್ಡ ಪ್ರಮಾಣದ ರೂಪಾಂತರದ ಸುಳಿವು ನೀಡಿದೆ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
ಮಿಲಿಟರಿಯ ಪ್ರಮುಖ ಪುನರ್ರಚನೆಗೆ ಯೋಜನೆಯನ್ನು ಪ್ರಾರಂಭಿಸಲು ಅಧ್ಯಕ್ಷರಿಂದ ಆದೇಶವನ್ನು ಪಡೆದಿರುವುದಾಗಿ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಹೇಳಿದ್ದಾರೆ. ಇದರರ್ಥ ನಾವು ಸಂಘರ್ಷವನ್ನು ಬಯಸುತ್ತಿದ್ದೇವೆ ಎಂದಲ್ಲ, ಯೋಧರ ನೈತಿಕತೆಯನ್ನು ಮರುಸ್ಥಾಪಿಸುವುದು ನಮ್ಮ ಉದ್ದೇಶವಾಗಿದೆ. ದುರದೃಷ್ಟವಶಾತ್ ಈ ಹಿಂದಿನ ಆಡಳಿತದ ದೌರ್ಬಲ್ಯವು ರಶ್ಯ ಮತ್ತು ಚೀನಾವನ್ನು ನಿಕಟವಾಗಿಸಿದೆ. ಇದು ಅಮೆರಿಕನ್ ನಾಯಕತ್ವದ ಕೊರತೆಯ ಭಯಾನಕ ಬೆಳವಣಿಗೆಯಾಗಿದೆ. ಆದ್ದರಿಂದಲೇ ಅಧ್ಯಕ್ಷರು ಮಿಲಿಟರಿ ಪುನರ್ರಚನೆಗೆ ತಯಾರಿ ನಡೆಸಲು ಸೂಚಿಸಿದ್ದಾರೆ' ಎಂದು ಹೆಗ್ಸೆಥ್ ಹೇಳಿರುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.





