ಇರಾನ್ ಯುದ್ಧದ ಬಗ್ಗೆ ಟ್ರಂಪ್ ಮಹತ್ವದ ಸುಳಿವು; ಮೂರು ಆಯ್ಕೆಗಳು ಮುಂದಿಟ್ಟ ಅಮೆರಿಕ

ವಾಷಿಂಗ್ಟನ್, ಸೆ.21: ಇರಾನ್ ಯುದ್ಧದ ವಿಷಯದಲ್ಲಿ ಅಮೆರಿಕ ‘ನಿರ್ಧಾರ ಕೈಗೊಳ್ಳುವ ಹಂತದಲ್ಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಹೇಳಿದ್ದಾರೆ. ಇರಾನ್ ಆಡಳಿತ ಸರಿಯಾಗಿ ನಡೆದುಕೊಳ್ಳದಿದ್ದರೆ ‘ಬಹಳ ದೊಡ್ಡ ವಿಷಯಗಳು ಸದ್ಯದಲ್ಲೇ ಸಂಭವಿಸಲಿವೆ’ ಎಂದು ಅವರು ಎಚ್ಚರಿಸಿದ್ದಾರೆ.
ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯಲು ಇರಾನ್ ತನ್ನ ಷರತ್ತುಗಳನ್ನು ಮಧ್ಯವರ್ತಿಗಳ ಮೂಲಕ ವಾಷಿಂಗ್ಟನ್ ಗೆ ತಿಳಿಸಿರುವ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ನ್ಯೂಯಾರ್ಕ್‌ಗೆ ಭೇಟಿ ನೀಡುವ ನಿರೀಕ್ಷೆಯಿರುವ ಸಂದರ್ಭದಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಅವರೊಂದಿಗೆ ಉನ್ನತ ಮಟ್ಟದ ನಿಯೋಗವೂ ತೆರಳುವ ಸಾಧ್ಯತೆ ಇದೆ ಎಂದು ಇರಾನ್‌ನ ಅರೆ-ಅಧಿಕೃತ ಸುದ್ದಿ ಸಂಸ್ಥೆ ‘ತಸ್ನಿಮ್’ ವರದಿ ಮಾಡಿದೆ.
‘ನಿರ್ಧಾರ ಕೈಗೊಳ್ಳುವ ಹಂತದಲ್ಲಿ’
ಫಾಕ್ಸ್ ನ್ಯೂಸ್‌ನೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಕುರಿತು ಅಮೆರಿಕ ನಿರ್ಧಾರ ಕೈಗೊಳ್ಳುವ ಹಂತದಲ್ಲಿದೆ ಎಂದು ಹೇಳಿದ್ದಾರೆ.
“ನನ್ನ ಪ್ರಶ್ನೆಯೆಂದರೆ, ನಾನು ಇಡೀ ರಾಷ್ಟ್ರವನ್ನೇ ಯಾವಾಗ ಸ್ಫೋಟಿಸಬೇಕು? ಅವರು ಸರಿಯಾಗಿ ನಡೆದುಕೊಳ್ಳುವುದು ಒಳ್ಳೆಯದು” ಎಂದು ಅವರು ಹೇಳಿದ್ದಾರೆ.
ಇರಾನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ಮೂರು ಸಂಭಾವ್ಯ ಆಯ್ಕೆಗಳನ್ನು ಟ್ರಂಪ್ ಚರ್ಚಿಸಿದ್ದಾರೆ. ಇರಾನ್ ಅನ್ನು ಸಂಪೂರ್ಣವಾಗಿ ನಾಶಪಡಿಸುವುದು, ದೇಶ ಆರ್ಥಿಕವಾಗಿ ಕುಸಿಯುವಂತೆ ಬಿಡುವುದು ಅಥವಾ ಒಪ್ಪಂದವೊಂದನ್ನು ಮಾಡಿಕೊಳ್ಳುವುದು ಈ ಮೂರು ಆಯ್ಕೆಗಳಾಗಿವೆ ಎಂದು ವರದಿಯಾಗಿದೆ.
ಪ್ರದೇಶದಲ್ಲಿನ ಇತರ ಸಂಘರ್ಷಗಳ ಕುರಿತು ಮಾತನಾಡಿದ ಟ್ರಂಪ್, ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳು ನಡೆದಿದ್ದರೂ ಅಮೆರಿಕವು ಯೆಮನ್‌ನ ಹೌದಿ ಬಂಡುಕೋರರೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.
ಅಮೆರಿಕದ ಸಿಬ್ಬಂದಿ ಮೇಲೆ ದಾಳಿ ನಡೆಸದಿರಲು ಹೌದಿ ಗುಂಪು ಒಪ್ಪಿಕೊಂಡಿದೆ ಎಂದೂ ಅವರು ತಿಳಿಸಿದ್ದಾರೆ.
ಪೆಜೆಶ್ಕಿಯನ್ ಭೇಟಿ ಸಾಧ್ಯತೆ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಪೆಜೆಶ್ಕಿಯನ್ ಅಮೆರಿಕಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ, ಅವರನ್ನು ಭೇಟಿ ಮಾಡುವ ಸಾಧ್ಯತೆಯ ಕುರಿತು ಟ್ರಂಪ್ ಅವರನ್ನು ಪ್ರಶ್ನಿಸಲಾಯಿತು.
ವಿಶ್ವಸಂಸ್ಥೆಯ ಸಭೆಯ ಸಂದರ್ಭದಲ್ಲಿ ವಿವಿಧ ದೇಶಗಳ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿರುವ ಪೆಜೆಶ್ಕಿಯನ್ ಅವರನ್ನು ಭೇಟಿಯಾಗಲು ತಾನು ‘ಬಹುಶಃ ಸಿದ್ಧವಿರುವುದಾಗಿ’ ಟ್ರಂಪ್ ಹೇಳಿದ್ದಾರೆ.
ಅಮೆರಿಕದೊಂದಿಗೆ ಮಾತುಕತೆಗೆ ಇರಾನ್‌ನ ಏಳು ಷರತ್ತು
ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಅಮೆರಿಕದೊಂದಿಗೆ ಮಾತುಕತೆ ಪುನರಾರಂಭಿಸಲು ಇರಾನ್ ಏಳು ಷರತ್ತುಗಳನ್ನು ವಿಧಿಸಿದೆ ಎಂದು ದೇಶದ ಉನ್ನತ ಸಂಧಾನಕಾರ ಮೊಹಮ್ಮದ್ ಬಘೇರ್ ಘಲಿಬಾಫ್ ಭಾನುವಾರ ಹೇಳಿದ್ದಾರೆ.
ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಖತರ್ ಮೂಲಕ ಟೆಹ್ರಾನ್ ತನ್ನ ಬೇಡಿಕೆಗಳನ್ನು ವಾಷಿಂಗ್ಟನ್ ಗೆ ಕಳುಹಿಸಿದೆ ಎಂದು ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಮುಖ್ಯಸ್ಥ ಮೊಹ್ಸೆನ್ ರೆಜಾಯಿ ಒಂದು ದಿನ ಹಿಂದಷ್ಟೇ ಹೇಳಿದ್ದರು.
“ಎಲ್ಲಾ ರಂಗಗಳಲ್ಲಿ ಯುದ್ಧದ ಅಂತ್ಯ, ಸ್ಥಗಿತಗೊಂಡಿರುವ ನಮ್ಮ ಹಣದ ಬಿಡುಗಡೆ ಮತ್ತು ನೌಕಾ ದಿಗ್ಬಂಧನದ ಅಂತ್ಯವೇ ನಮ್ಮ ಷರತ್ತುಗಳು” ಎಂದು ಘಲಿಬಾಫ್ Aljazeera ಕ್ಕೆ ತಿಳಿಸಿದ್ದಾರೆ.
ಈ ಮಧ್ಯೆ, ಹಲವು ಪ್ರಾದೇಶಿಕ ದೇಶಗಳ ಬೆಂಬಲದೊಂದಿಗೆ ಅಮೆರಿಕವು ಟೆಹ್ರಾನ್ ವಿರುದ್ಧ ಮತ್ತೊಂದು ಮಿಲಿಟರಿ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ದೊರೆತಿದೆ ಎಂದು ಇರಾನ್‌ನ ಕೇಂದ್ರ ಮಿಲಿಟರಿ ಕಮಾಂಡ್ ರವಿವಾರ ಹೇಳಿದೆ.
ವಾಷಿಂಗ್ಟನ್ ಅನ್ನು ಬೆಂಬಲಿಸುವ ದೇಶಗಳನ್ನು ಈ ‘ದುಷ್ಕೃತ್ಯ’ದ ಪಾಲುದಾರರೆಂದು ಪರಿಗಣಿಸಲಾಗುವುದು ಎಂದು ಇರಾನ್ ಎಚ್ಚರಿಸಿದೆ.
‘ಶಕ್ತಿಯುತ ಇರಾನಿನ ಸಶಸ್ತ್ರ ಪಡೆಗಳಿಂದ ಸಂಯಮವನ್ನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದೂ ಇರಾನ್ ನ ಕೇಂದ್ರ ಮಿಲಿಟರಿ ಕಮಾಂಡ್ ಎಚ್ಚರಿಕೆ ನೀಡಿದೆ.






