ವಾಷಿಂಗ್ಟನ್ ಡಿಸಿಯಲ್ಲಿ ಪ್ರತ್ಯಕ್ಷವಾದ ಟೈಟಾನಿಕ್ ಭಂಗಿಯ ಟ್ರಂಪ್–ಎಪ್ಸ್ಟೀನ್ ಪ್ರತಿಮೆ!

Photo Credit : X
ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಶಿಕ್ಷೆಗೆ ಒಳಗಾದ ಮಕ್ಕಳ ಮೇಲಿನ ಲೈಂಗಿಕ ಪ್ರಕರಣಗಳ ಅಪರಾಧಿ ಜೆಫ್ರಿ ಎಪ್ಸ್ಟೀನ್ ನನ್ನು ಹೋಲುವ ವ್ಯಕ್ತಿಗಳನ್ನು ಒಳಗೊಂಡ ಪ್ರತಿಭಟನಾ ಕಲಾ ಪ್ರತಿಮೆ ವಾಷಿಂಗ್ಟನ್ ಡಿಸಿಯ ಐಕಾನಿಕ್ ನ್ಯಾಷನಲ್ ಮಾಲ್ ಪಾರ್ಕ್ ನಲ್ಲಿ ಕಾಣಿಸಿಕೊಂಡಿದ್ದು ಸಾರ್ವಜನಿಕರ ಗಮನ ಸೆಳೆದಿದೆ.
ಟೈಟಾನಿಕ್ ಸಿನಿಮಾದ ಪ್ರಸಿದ್ಧ ಭಂಗಿಯನ್ನು ಹೋಲುವ ರೀತಿಯಲ್ಲಿ ಟ್ರಂಪ್ ಮತ್ತು ಎಪ್ಸ್ಟೀನ್ ಪ್ರತಿಮೆಗಳು ನಿಂತಿರುವಂತೆ ಈ ಕಲಾಕೃತಿಯನ್ನು ರೂಪಿಸಲಾಗಿದೆ. ಇದನ್ನು ‘ಸೀಕ್ರೆಟ್ ಹ್ಯಾಂಡ್ ಶೇಕ್’ ಎಂದು ಕರೆಯಲ್ಪಡುವ ಕಲಾವಿದರ ಸಾಮೂಹಿಕ ತಂಡ ನಿರ್ಮಿಸಿದೆ ಎಂದು ವರದಿಯಾಗಿದೆ.
ಈ ವಾರದ ಆರಂಭದಲ್ಲಿ ಈ ಪ್ರತಿಮೆ ಕಾಣಿಸಿಕೊಂಡಿದೆ. ಟ್ರಂಪ್ ಮತ್ತು ಜೆಫ್ರಿ ಎಪ್ಸ್ಟೀನ್ ನಡುವಿನ ಸಂಬಂಧಗಳ ಬಗ್ಗೆ ಅಮೆರಿಕದಲ್ಲಿ ಚರ್ಚೆ ನಡೆಯುತ್ತಿರುವ ಸಮಯದಲ್ಲೇ ಇದು ಗಮನ ಸೆಳೆಯುತ್ತಿದೆ. ಎಪ್ಸ್ಟೀನ್ ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಎಂದು ಆರೋಪಿಸಲಾಗಿತ್ತು.
ಅಮೆರಿಕ ರಾಜಧಾನಿಯಲ್ಲಿ ಇತ್ತೀಚೆಗೆ ಇದೇ ರೀತಿಯ ಪ್ರತಿಭಟನಾ ಕಲಾಕೃತಿಗಳ ಸರಣಿ ಕಾಣಿಸಿಕೊಂಡಿದೆ. ಕಳೆದ ವಾರ ವಾಷಿಂಗ್ಟನ್ ಡಿಸಿಯ ಫರಾಗುಟ್ ಸ್ಕ್ವೇರ್ ನಲ್ಲಿ ‘ಜೆಫ್ರಿ ಎಪ್ಸ್ಟೀನ್ ವಾಕ್ ಆಫ್ ಶೇಮ್’ ಎಂಬ ಪ್ರದರ್ಶನ ಕಾಣಿಸಿಕೊಂಡಿತ್ತು. ಹಾಲಿವುಡ್ ವಾಕ್ ಆಫ್ ಫೇಮ್ ಮಾದರಿಯಲ್ಲಿ ನಿರ್ಮಿಸಲಾದ ಈ ಪ್ರದರ್ಶನದಲ್ಲಿ ರಾಜಕಾರಣಿಗಳು, ಬಿಲಿಯನೇರ್ಗಳು ಮತ್ತು ಎಪ್ಸ್ಟೀನ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ವರದಿಯಾದ ಇತರ ವ್ಯಕ್ತಿಗಳ ಹೆಸರುಗಳನ್ನು ಪ್ರದರ್ಶಿಸಲಾಗಿತ್ತು.
ಇದಕ್ಕೂ ಮೊದಲು ಸೆಪ್ಟೆಂಬರ್ ನಲ್ಲಿ ‘ಬೆಸ್ಟ್ ಫ್ರೆಂಡ್ಸ್ ಫಾರೆವರ್’ ಎಂಬ ಶೀರ್ಷಿಕೆಯ ಮತ್ತೊಂದು ಕಲಾಕೃತಿ ನ್ಯಾಷನಲ್ ಮಾಲ್ ನಲ್ಲಿ ಕಾಣಿಸಿಕೊಂಡಿತ್ತು. ಟ್ರಂಪ್ ಮತ್ತು ಎಪ್ಸ್ಟೀನ್ ಕೈ ಹಿಡಿದಿರುವಂತೆ ತೋರಿಸುವ ಸ್ಪ್ರೇ–ಪೇಂಟ್ ಮಾಡಿದ ಕಂಚಿನ ಪ್ರತಿಮೆಯನ್ನು ಕೂಡ ಇದೇ ‘ಸೀಕ್ರೆಟ್ ಹ್ಯಾಂಡ್ಶೇಕ್’ ಕಲಾವಿದರ ಗುಂಪು ನಿರ್ಮಿಸಿದೆ ಎಂದು ಹೇಳಲಾಗಿದೆ.






