ನಾನು 'ಮಿಸ್ಟರ್ ವೀಟೊ' ಆಗುತ್ತೇನೆ | ಮಧ್ಯಂತರ ಚುನಾವಣೆಯಲ್ಲಿ ಹಿನ್ನಡೆಯಾದರೂ ಕಾರ್ಯಸೂಚಿ ಮುಂದುವರಿಸಲು ವೀಟೊ ಪ್ರಯೋಗ: ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ನ. 2: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಸಂಸತ್ತಿನ ಎರಡೂ ಸದನಗಳ ನಿಯಂತ್ರಣವನ್ನು ಪಡೆದುಕೊಂಡರೆ, ಆ ಪಕ್ಷದ ಶಾಸಕಾಂಗದ ಕಾರ್ಯಸೂಚಿಗೆ ತಡೆಯೊಡ್ಡಲು ವೀಟೊ ಅಧಿಕಾರ ಬಳಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
'ನನ್ನ ಆಡಳಿತದ ಕೆಲಸಗಳನ್ನು ರದ್ದುಗೊಳಿಸಲು ವಿರೋಧ ಪಕ್ಷಕ್ಕೆ ಅವಕಾಶ ನೀಡುವುದಿಲ್ಲ. ಅವರು ನನ್ನ ಕೆಲಸವನ್ನು ಹಾಳುಮಾಡಲು ನಾನು ಬಿಡುವುದಿಲ್ಲ. ನಾನು 'ಮಿಸ್ಟರ್ ವೀಟೊ' ಆಗುತ್ತೇನೆ ಎಂದು ಭಾವಿಸುತ್ತೇನೆ. ಶಾಸಕಾಂಗದ ಬಿಕ್ಕಟ್ಟು ಉಂಟಾದ ಬಳಿಕ ರಾಜಕೀಯ ಮಾತುಕತೆಗಳು ನಡೆಯಬಹುದು' ಎಂದು ರಿಪಬ್ಲಿಕನ್ ನಾಯಕ ಟ್ರಂಪ್ ಹೇಳಿದ್ದಾರೆ.
ಡೆಮಾಕ್ರಟ್ ಗಳು ಕಾಂಗ್ರೆಸ್ ನ ನಿಯಂತ್ರಣ ಸಾಧಿಸಿದರೂ ತಮ್ಮ ಕಾರ್ಯಸೂಚಿಯನ್ನು ಮುಂದುವರಿಸಲು ಮಾರ್ಗಗಳನ್ನು ಕಂಡುಕೊಳ್ಳುವುದಾಗಿ ಅವರು ಸುಳಿವು ನೀಡಿದ್ದಾರೆ.
ಪುನರಾವರ್ತಿತ ಅಧ್ಯಕ್ಷೀಯ ವೀಟೊಗಳು ಅಂತಿಮವಾಗಿ ಸಂಸದರನ್ನು ಮಾತುಕತೆ ಮತ್ತು ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಬಹುದು ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
'ಅವರು ಯಾವುದೇ ಮಸೂದೆಗಳನ್ನು ಅಂಗೀಕರಿಸಿದರೂ ನೀವು ವೀಟೊ ಮಾಡುತ್ತೀರಿ. ಹೀಗೆ ಒಂದು ಅಥವಾ ಎರಡು ತಿಂಗಳ ಕಾಲ ಎಲ್ಲವೂ ವೀಟೊ ಆದ ಬಳಿಕ, ಸಮಯ ವ್ಯರ್ಥವಾಗುತ್ತಿದೆ ಎಂದು ಅವರು ಭಾವಿಸುತ್ತಾರೆ. ಆಗ ನಿಮ್ಮ ಬಳಿಗೆ ಬಂದು ಒಪ್ಪಂದ ಮಾಡಿಕೊಳ್ಳುತ್ತಾರೆ. ಬಹುಶಃ ಹಾಗೆಯೇ ಆಗಬಹುದು. ಆದರೆ ಈ ಬಗ್ಗೆ ನಾವು ಚಿಂತಿಸಬೇಕಾಗಿಲ್ಲ' ಎಂದು ಅವರು ಹೇಳಿದ್ದಾರೆ.
ಸಂಸತ್ತಿನ ನಿಯಂತ್ರಣ ನಿರ್ಧರಿಸಲಿರುವ ಮಧ್ಯಂತರ ಚುನಾವಣೆ
ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ಅಮೆರಿಕನ್ನರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ (ಸಂಸತ್ತಿನ ಕೆಳಮನೆ) ಎಲ್ಲ 435 ಸದಸ್ಯರನ್ನು ಹಾಗೂ ಸೆನೆಟ್ ನ 35 ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.
ಟ್ರಂಪ್ ಅವರ ಅಧ್ಯಕ್ಷತೆಯ ಕೊನೆಯ ಎರಡು ವರ್ಷಗಳಲ್ಲಿ ಯಾವ ಪಕ್ಷವು ಸಂಸತ್ತಿನ ನಿಯಂತ್ರಣ ಹೊಂದಿರಲಿದೆ ಎಂಬುದನ್ನು ಈ ಚುನಾವಣೆಯ ಫಲಿತಾಂಶ ನಿರ್ಧರಿಸಲಿದೆ.
ರಿಪಬ್ಲಿಕನ್ನರು ಪ್ರಸ್ತುತ ಎರಡೂ ಸದನಗಳಲ್ಲಿ ಅಲ್ಪ ಬಹುಮತ ಹೊಂದಿದ್ದಾರೆ. ಹೌಸ್ ನಲ್ಲಿ 218-214 ಮತ್ತು ಸೆನೆಟ್ ನಲ್ಲಿ 53-47 ಸದಸ್ಯ ಬಲ ಹೊಂದಿದ್ದಾರೆ.
►5.4 ಕೋಟಿ ಮತ ಚಲಾವಣೆ
ಅಮೆರಿಕದ ಸಂಸತ್ತಿನ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಹೋರಾಟವು ಸೋಮವಾರ ಅಂತಿಮ ಹಂತ ತಲುಪಿದೆ. ಮಂಗಳವಾರ ನಡೆಯಲಿರುವ ಮಧ್ಯಂತರ ಚುನಾವಣೆಗೆ ಮುನ್ನ 5.4 ಕೋಟಿಗೂ ಹೆಚ್ಚು ಅಮೆರಿಕನ್ನರು ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ.
ಟೆಕ್ಸಾಸ್ ಮತ್ತು ಕಾನ್ಸಾಸ್ ಸೇರಿದಂತೆ ರಿಪಬ್ಲಿಕನ್ನರ ಹಿಡಿತದಲ್ಲಿರುವ ಪ್ರಮುಖ ರಾಜ್ಯಗಳಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ ಎಂದು 'ನ್ಯೂಯಾರ್ಕ್ ಟೈಮ್ಸ್/ಸಿಯೆನಾ' ಸಮೀಕ್ಷೆಗಳು ತಿಳಿಸಿವೆ. ಈ ಸಮೀಕ್ಷೆಗಳ ಪ್ರಕಾರ ಡೆಮಾಕ್ರಟ್ ಗಳು ಸೆನೆಟ್ ನಲ್ಲಿ ಬಹುಮತ ಪಡೆಯುವ ಸಾಧ್ಯತೆಯಿದೆ. ಆದರೆ ಚುನಾವಣಾ ಫಲಿತಾಂಶವೇ ಅಂತಿಮವಾಗಲಿದೆ.






