ಉಕ್ರೇನ್ ಸಂಘರ್ಷ ಕೊನೆಗೊಳ್ಳದಿದ್ದರೆ ಬೃಹತ್ ನಿರ್ಬಂಧ: ರಶ್ಯಕ್ಕೆ ಟ್ರಂಪ್ ಗಡುವು

PC | PTI
ವಾಷಿಂಗ್ಟನ್, ಆ.23: ಎರಡು ವಾರಗಳೊಳಗೆ ಉಕ್ರೇನ್ ಸಮಸ್ಯೆಗೆ ಶಾಂತಿಯುತ ಇತ್ಯರ್ಥದ ಬಗ್ಗೆ ಯಾವುದೇ ಪ್ರಗತಿಯಾಗದಿದ್ದಲ್ಲಿ ರಶ್ಯದ ಮೇಲೆ ಬೃಹತ್ ನಿರ್ಬಂಧ ವಿಧಿಸುವ ಬೆದರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪುನರುಚ್ಚರಿಸಿದ್ದಾರೆ.
ಅಲಾಸ್ಕಾದಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗಿನ ಸಭೆ ನಡೆದು ಒಂದು ವಾರದೊಳಗೆ ಉಕ್ರೇನ್ ಮೇಲಿನ ದಾಳಿಯನ್ನು ರಶ್ಯ ತೀವ್ರಗೊಳಿಸಿರುವ ಬಗ್ಗೆ ಟ್ರಂಪ್ ಹತಾಶೆಗೊಂಡಿರುವುದಾಗಿ ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ.
ಉಕ್ರೇನ್ನಲ್ಲಿರುವ ಅಮೆರಿಕದ ಫ್ಯಾಕ್ಟರಿಯ ಮೇಲೆ ಈ ವಾರ ರಶ್ಯ ನಡೆಸಿದ ದಾಳಿಯಿಂದ ತೀವ್ರ ಅಸಮಾಧಾನಗೊಂಡಿರುವುದಾಗಿ ಟ್ರಂಪ್ ಹೇಳಿದ್ದಾರೆ. ಈ ದಾಳಿಯಲ್ಲಿ ಕಾರ್ಖಾನೆಯ ಹಲವು ಉದ್ಯೋಗಿಗಳು ಗಾಯಗೊಂಡಿದ್ದರು.
`ನಾವು ಏನು ಮಾಡುತ್ತೇವೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಮತ್ತು ಅದು ತುಂಬಾ ಮಹತ್ವದ ನಿರ್ಧಾರವಾಗಲಿದೆ. ಬೃಹತ್ ಸುಂಕ ಅಥವಾ ಬೃಹತ್ ನಿರ್ಬಂಧ, ಅಥವಾ ಎರಡನ್ನೂ ವಿಧಿಸಬೇಕೇ, ಅಥವಾ ನಿಮ್ಮ ಹೋರಾಟ, ಏನು ಬೇಕಾದರೂ ಮಾಡಿಕೊಳ್ಳಿ ಎಂದು ಸುಮ್ಮನಿರಬೇಕೇ ಎಂಬ ಬಗ್ಗೆ ನಿರ್ಧರಿಸಲಾಗುವುದು' ಎಂದು ಟ್ರಂಪ್ ಹೇಳಿದ್ದಾರೆ.
ರಶ್ಯ ಮತ್ತು ಉಕ್ರೇನ್ ಅಧ್ಯಕ್ಷರ ನಡುವೆ ಯಾವುದೇ ಸಭೆಯನ್ನು ಯೋಜಿಸಲಾಗಿಲ್ಲ. ಸಭೆಗೆ ಅಧ್ಯಕ್ಷರ ಕಾರ್ಯಸೂಚಿ ಇದ್ದರೆ ಮಾತ್ರ ಉಕ್ರೇನ್ ಅಧ್ಯಕ್ಷರನ್ನು ಭೇಟಿಯಾಗುವುದಾಗಿ ಅಧ್ಯಕ್ಷ ಪುಟಿನ್ ಸ್ಪಷ್ಟವಾಗಿ ಹೇಳಿದ್ದಾರೆ' ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಶುಕ್ರವಾರ ನೀಡಿದ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್ `ನಾವು ಈ ಬಗ್ಗೆ ಗಮನ ಹರಿಸುತ್ತೇವೆ. ಪುಟಿನ್ ಮತ್ತು ಝೆಲೆನ್ಸ್ಕಿ ಒಟ್ಟಿಗೇ ಕೆಲಸ ಮಾಡುತ್ತಾರೆಯೇ ಎಂದು ನಾವು ನೋಡಲಿದ್ದೇವೆ. ಇದನ್ನು ಎಣ್ಣೆ ಮತ್ತು ವಿನೆಗರ್ನ ಮಿಶ್ರಣ( ಸ್ವಾಭಾವಿಕವಾಗಿ ಬೆರೆಯದ ಅಥವಾ ಜೊತೆಯಾಗದ ಎರಡು ವಿಷಯಗಳು)ವೆನ್ನಬಹುದು' ಎಂದು ಉತ್ತರಿಸಿದರು.
*ಸಭೆ ತಡೆಯಲು ರಶ್ಯ ಶತಪ್ರಯತ್ನ: ಝೆಲೆನ್ಸ್ಕಿ
ಉಕ್ರೇನ್ ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ರಶ್ಯ ಬಯಸುತ್ತಿಲ್ಲ. ತನ್ನ ಮತ್ತು ಪುಟಿನ್ ನಡುವಿನ ಸಭೆಯನ್ನು ತಡೆಯಲು ರಶ್ಯ ಶತಪ್ರಯತ್ನ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಇಂತಹ ಸಭೆಗೆ ಕಾರ್ಯಸೂಚಿ ಸಿದ್ಧವಾಗಿಲ್ಲ ಎಂಬ ರಶ್ಯ ವಿದೇಶಾಂಗ ಸಚಿವರ ಹೇಳಿಕೆಯನ್ನು ಟೀಕಿಸಿದ ಝೆಲೆನ್ಸ್ಕಿ ` ಸಭೆಯು ಯುದ್ಧವನ್ನು ಹೇಗೆ ಕೊನೆಗೊಳಿಸಬೇಕು ಎಂಬ ಅಂಶಗಳಲ್ಲಿ ಒಂದಾಗಿದೆ. ಅದನ್ನು ಕೊನೆಗೊಳಿಸಲು ಅವರು(ರಶ್ಯ) ಬಯಸಿಲ್ಲದ ಕಾರಣ ಅವರು ಸಭೆಯನ್ನು ತಪ್ಪಿಸಲು ಕಾರಣವನ್ನು ಹುಡುಕುತ್ತಿದ್ದಾರೆ' ಎಂದು ಝೆಲೆನ್ಸ್ಕಿ ಟೀಕಿಸಿದ್ದಾರೆ.







