ಟ್ರಂಪ್ ನಮಗೆ ದ್ರೋಹ ಬಗೆದಿದ್ದಾರೆ: ಇರಾನ್ನಲ್ಲಿ ಪ್ರತಿಭಟನಾಕಾರರ ಆಕ್ರೋಶ

Image Credit: NDTV
ಟೆಹ್ರಾನ್, ಜ.18: ಇತ್ತೀಚಿನ ಪ್ರತಿಭಟನೆಯ ಅಲೆಯ ಸಮಯದಲ್ಲಿ ಬೀದಿಗಿಳಿದ ಅನೇಕ ಇರಾನಿಯನ್ನರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೀವನಾಡಿಯಾಗಿ ಕಾಣಿಸಿಕೊಂಡಿದ್ದರು. ಆ ನಂಬಿಕೆ, ವಿಶ್ವಾಸಕ್ಕೆ ಅವರು ದ್ರೋಹ ಬಗೆದಿದ್ದಾರೆ. ಅವರು ನಮ್ಮನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಇರಾನಿನ ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ಆರಂಭದ ದಿನಗಳಲ್ಲಿ ಅಮೆರಿಕಾ ಅಧ್ಯಕ್ಷರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಪ್ರೋತ್ಸಾಹಿಸಿ ಇರಾನ್ ಆಡಳಿತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು ಮತ್ತು `ಸಹಾಯ ಬರುತ್ತಿದೆ' ಎಂದು ಘೋಷಿಸಿದ್ದರು. ಶಾಂತಿಯುತ ಪ್ರತಿಭಟನಾಕಾರರಿಗೆ ಹಾನಿ ಎಸಗಿದರೆ ಅಮೆರಿಕಾ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ ಟ್ರಂಪ್ ಕ್ರಮೇಣ ಮೃದು ನಿಲುವು ತಳೆದಿರುವುದನ್ನು ಪ್ರತಿಭಟನಾಕಾರರು ಟೀಕಿಸಿದ್ದಾರೆ.
`ಇರಾನಿನಲ್ಲಿ ಪ್ರತಿಭಟನೆಯ ಸಂದರ್ಭ ನಡೆದ ಸಾವುಗಳಿಗೆ ಟ್ರಂಪ್ ಹೊಣೆ. ಯಾಕೆಂದರೆ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದವರನ್ನು ಅವರು ಪ್ರೋತ್ಸಾಹಿಸಿದ್ದರು ಮತ್ತು ಅಮೆರಿಕಾದ ನೆರವಿನ ಭರವಸೆ ನೀಡಿದ್ದರು. ಆದರೆ ಬಳಿಕ ಈ ರೀತಿ ದ್ರೋಹ ಎಸಗಿರುವುದನ್ನು ಕಂಡರೆ ಅಮೆರಿಕಾವು ಇರಾನ್ ಆಡಳಿತದ ಜೊತೆಗೆ `ಡೀಲ್' ಮಾಡಿಕೊಂಡಿರುವ ಅನುಮಾನ ಮೂಡುತ್ತಿದೆ ಎಂದು ಪ್ರತಿಭಟನಾಕಾರರನ್ನು ಉಲ್ಲೇಖಿಸಿ `ಟೈಮ್' ಪತ್ರಿಕೆ ವರದಿ ಮಾಡಿದೆ.





