ಭಾರತದ ಮೇಲಿನ ಹೆಚ್ಚುವರಿ ಸುಂಕಕ್ಕೆ ತಡೆ; ಟ್ರಂಪ್ ಸುಳಿವು

ಡೊನಾಲ್ಡ್ ಟ್ರಂಪ್ | PC : NDTV
ವಾಷಿಂಗ್ಟನ್, ಆ.16: ಅಲಾಸ್ಕಾದಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗಿನ ಐತಿಹಾಸಿಕ ಸಭೆಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಶ್ಯದಿಂದ ಕಚ್ಛಾತೈಲ ಖರೀದಿಸುವ ದೇಶಗಳ (ಭಾರತ ಸೇರಿದಂತೆ) ವಿರುದ್ಧದ ಹೆಚ್ಚುವರಿ ಸುಂಕವನ್ನು ತಡೆಹಿಡಿಯುವ ಸುಳಿವನ್ನು ನೀಡಿರುವುದಾಗಿ ವರದಿಯಾಗಿದೆ.
ತಮ್ಮ ಬಿಗಿ ನಿಲುವನ್ನು ಸಡಿಲಗೊಳಿಸಿರುವ ಟ್ರಂಪ್ `ರಶ್ಯದ ಕಚ್ಛಾ ತೈಲವನ್ನು ಖರೀದಿಸುವುದನ್ನು ಮುಂದುವರಿಸಿರುವ ದೇಶಗಳ ವಿರುದ್ಧ ಹೆಚ್ಚುವರಿ ಸುಂಕವನ್ನು ಅಮೆರಿಕ ತಡೆಹಿಡಿಯಬಹುದು' ಎಂದು ಹೇಳಿದ್ದಾರೆ.
ಅವರು(ಪುಟಿನ್) ಒಬ್ಬ ತೈಲ ಗ್ರಾಹಕರನ್ನು ಕಳೆದುಕೊಳ್ಳಬಹುದು. ಅದು ಭಾರತ ಅಥವಾ ಚೀನಾ ಆಗಿರಬಹುದು. ಭಾರತ ತನ್ನ ತೈಲ ಬೇಡಿಕೆಯ 40%ವನ್ನು ರಶ್ಯದಿಂದ ಖರೀದಿಸುತ್ತದೆ. ಚೀನಾವೂ ರಶ್ಯದಿಂದ ಸಾಕಷ್ಟು ತೈಲ ಖರೀದಿಸುತ್ತದೆ. ಅವರ ವಿರುದ್ಧ ಹೆಚ್ಚುವರಿ ಸುಂಕ ವಿಧಿಸಿದರೆ ವಿನಾಶಕಾರಿ ಎಂಬುದು ಅವರ ದೃಷ್ಟಿಕೋನವಾಗಿದೆ. ಅದನ್ನು ಮಾಡಬೇಕು ಎಂದಾದರೆ ನಾನು ಮಾಡುತ್ತೇನೆ. ಆದರೆ ಬಹುಷಃ ನಾನು ಮಾಡಬೇಕಿಲ್ಲ' ಎಂದವರು ಹೇಳಿದ್ದಾರೆ.





