200% ತೆರಿಗೆ ಮೂಲಕ ಚೀನಾವನ್ನು ನಾಶಪಡಿಸಬಲ್ಲೆ: ಟ್ರಂಪ್

PC: x.com/FoxBusiness
ವಾಷಿಂಗ್ಟನ್: ಚೀನಾದ ಮೇಲೆ ಅಮೆರಿಕ ನಿಯಂತ್ರಣ ಹೊಂದಿದ್ದು, ಅಗತ್ಯ ಬಿದ್ದರೆ ಶೇಕಡ 200ರಷ್ಟು ಸುಂಕ ವಿಧಿಸುವ ಮೂಲಕ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ನಾಶಪಡಿಸಬಲ್ಲೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.
ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೀ ಮೈಯುಂಗ್ ಜತೆಗಿನ ದ್ವಿಪಕ್ಷೀಯ ಸಭೆಗೆ ಮುನ್ನ ಓವಲ್ ಆಫೀಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಪಾರ ಸಂಘರ್ಷದಲ್ಲಿ ಅಮೆರಿಕದ ಸ್ಥಾನ ಚೀನಾಕ್ಕಿಂತ ಭದ್ರವಾಗಿದೆ. ಅವರ ಬಳಿ ಕೆಲ ಕಾರ್ಡ್ ಗಳಿದ್ದರೆ, ನಮ್ಮ ಬಳಿ ನಂಬಲಸಾಧ್ಯ ಕಾರ್ಡ್ ಗಳಿವೆ ಎಂದು ಎಚ್ಚರಿಸಿದರು.
"ಆದರೆ ಈ ಕಾರ್ಡ್ ಗಳನ್ನು ನಾವು ಆಡಲು ಬಯಸುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಚೀನಾ ನಾಶವಾಗುತ್ತದೆ. ನಾನು ಆ ಕಾರ್ಡ್ ಗಳನ್ನು ಆಡುವ ಸಾಧ್ಯತೆಯೂ ಇದೆ" ಎಂಬ ಸುಳಿವು ನೀಡಿದರು. ಆದರೆ ಅಮೆರಿಕ ಅಧ್ಯಕ್ಷರು ಆರ್ಥಿಕ, ರಾಜಕೀಯ ಅಥವಾ ಆಯಕಟ್ಟಿನ ಸಾಧನಗಳನ್ನು ಬಳಸುತ್ತಾರೆಯೇ ಎನ್ನುವ ಬಗ್ಗೆ ಸ್ಪಷ್ಟಪಡಿಸಿಲ್ಲ.
ವ್ಯಾಪಾರ ಬಿಕ್ಕಟ್ಟಿನ ಬಗ್ಗೆ ಒಪ್ಪಂದಕ್ಕೆ ಬರಲು 90 ದಿನಗಳ ಗಡುವಿನ ಬಳಿಕವೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಆಗಸ್ಟ್ 12ರಂದು ಉಭಯ ದೇಶಗಳು ಈ ಸಂಧಾನ ಮಾತುಕತೆಯನ್ನು ಮುಂದುವರಿಸಲು ನಿರ್ಧರಿಸಿದ್ದವು. ಕಳೆದ ಒಂದು ವರ್ಷದಿಂದ ಸುಂಕ ಸಮರ ನಡೆಯುತ್ತಿದ್ದು, ಟ್ರಂಪ್ ಚೀನಾ ಸರಕುಗಳ ಮೇಲಿನ ಸುಂಕವನ್ನು ಹಲವು ಪಟ್ಟು ಹೆಚ್ಚಿಸಿದ್ದಾರೆ.
ಚೀನಾದ ಮೇಲೆ ವಿಧಿಸುತ್ತಿರುವ ಶೇಕಡ 36ರಷ್ಟು ಸುಂಕವನ್ನು ಏಪ್ರಿಲ್ ನಲ್ಲಿ ಶೇಕಡ 145 ಕ್ಕೆ ಹೆಚ್ಚಿಸಲಾಗಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲೆ ಶೇಕಡ 10ರಷ್ಟು ಸುಂಕವನ್ನು ಚೀನಾ ವಿಧಿಸಿದೆ. ಚೀನಾದ ನೀತಿ ಭೂಮಿಯನ್ನೇ ಅಪರೂಪದ್ದು ಎಂದು ಬಣ್ಣಿಸಿದ ಟ್ರಂಪ್, ಚೀನಾ ಆಯಸ್ಕಾಂತ ಪೂರೈಸದಿದ್ದರೆ, ಶೇಕಡ 200ರವರೆಗೂ ಸುಂಕವನ್ನು ಹೆಚ್ಚಿಸುವುದಾಗಿ ಎಚ್ಚರಿಸಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.







