Nvidia ಷೇರು ಖರೀದಿಸಿ, ಚೀನಾಕ್ಕೆ AI ಚಿಪ್ ಮಾರಾಟಕ್ಕೆ ಅನುಮತಿ ನೀಡಿದ್ದ ಟ್ರಂಪ್!
ರಫ್ತು ನಿರ್ಬಂಧ ತೆರವುಗೂ ಮುನ್ನವೇ 50 ಲಕ್ಷ ಡಾಲರ್ ವರೆಗಿನ ಷೇರು ಖರೀದಿ; ಹಿತಾಸಕ್ತಿ ಸಂಘರ್ಷದ ಆರೋಪ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು Nvidia ಕಂಪೆನಿಯ ಲಕ್ಷಾಂತರ ಡಾಲರ್ ಮೌಲ್ಯದ ಷೇರುಗಳನ್ನು ಖರೀದಿಸಿದ ಬಳಿಕ, ಚೀನಾಕ್ಕೆ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಚಿಪ್ ಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರು. ಈ ಬೆಳವಣಿಗೆಗಳು ಅಧ್ಯಕ್ಷರ ವೈಯಕ್ತಿಕ ಆರ್ಥಿಕ ಹಿತಾಸಕ್ತಿ ಮತ್ತು ಸರಕಾರಿ ನೀತಿಗಳ ನಡುವಿನ ಸಂಬಂಧದ ಬಗ್ಗೆ ವಿವಾದಕ್ಕೆ ಕಾರಣವಾಗಿವೆ ಎಂದು ಭ್ರಷ್ಟಾಚಾರ ವಿರೋಧಿ ಸಂಘಟನೆಯೊಂದು ಆರೋಪಿಸಿದೆ.
ಟ್ರಂಪ್ ಅವರ ಹಣಕಾಸು ಬಹಿರಂಗಪಡಿಸುವಿಕೆಗಳ ಪ್ರಕಾರ, 2025ರ ಮೇ ತಿಂಗಳಲ್ಲಿ ಚೀನಾಕ್ಕೆ ಅತ್ಯಾಧುನಿಕ ಅಮೆರಿಕದ AI ಚಿಪ್ ಗಳ ರಫ್ತನ್ನು ನಿರ್ಬಂಧಿಸಿದ್ದ ಬೈಡನ್ ಆಡಳಿತದ ನಿಯಮವನ್ನು ರದ್ದುಗೊಳಿಸುವುದಕ್ಕೂ ಮುನ್ನ ಅವರು 10 ಲಕ್ಷ ಡಾಲರ್ ನಿಂದ 50 ಲಕ್ಷ ಡಾಲರ್ ಮೌಲ್ಯದ Nvidia ಷೇರುಗಳನ್ನು ಖರೀದಿಸಿದ್ದರು ಎನ್ನಲಾಗಿದೆ.
ವಿಶ್ವದ ಪ್ರಮುಖ ಚಿಪ್ ತಯಾರಕ ಕಂಪೆನಿಗಳಲ್ಲಿ ಒಂದಾದ Nvidiaಗೆ ರಫ್ತು ನಿರ್ಬಂಧ ತೆರವಿನಿಂದ ಲಾಭವಾಗುವ ಸಾಧ್ಯತೆಯಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ ಷೇರು ವಹಿವಾಟುಗಳು ಹಿತಾಸಕ್ತಿ ಸಂಘರ್ಷದ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಅವರ ಹಣಕಾಸು ದಾಖಲೆಗಳನ್ನು ಪರಿಶೀಲಿಸಿದ DeKleptocracy ಸಂಘಟನೆಯು ಈ ವಹಿವಾಟುಗಳನ್ನು ಗುರುತಿಸಿದೆ. Apple, Meta ಮತ್ತು Microsoft ಸೇರಿದಂತೆ ಇತರ ಪ್ರಮುಖ ತಂತ್ರಜ್ಞಾನ ಕಂಪೆನಿಗಳ ಷೇರುಗಳನ್ನೂ ಟ್ರಂಪ್ ಖರೀದಿಸಿರುವುದು ಬಹಿರಂಗವಾಗಿದೆ.
ಮಾಜಿ ಅಧ್ಯಕ್ಷ ಜೋ ಬೈಡನ್ ಆಡಳಿತ ಜಾರಿಗೆ ತಂದಿದ್ದ 'AI Diffusion Framework' ನಿಯಮವು ಅಮೆರಿಕದ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಚೀನಾದ ಕೈಗೆ ಸಿಗದಂತೆ ತಡೆಯುವ ಉದ್ದೇಶ ಹೊಂದಿತ್ತು. ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವುದು ಮತ್ತು AI ಕ್ಷೇತ್ರದಲ್ಲಿ ಅಮೆರಿಕದ ಮುಂಚೂಣಿಯನ್ನು ಕಾಯ್ದುಕೊಳ್ಳುವುದು ಇದರ ಉದ್ದೇಶವಾಗಿತ್ತು. ಅಮೆರಿಕದ ಅತ್ಯಾಧುನಿಕ ಚಿಪ್ ಗಳ ನೆರವಿನಿಂದ ಚೀನಾ ಹೆಚ್ಚು ಶಕ್ತಿಶಾಲಿ AI ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿ ಅಮೆರಿಕವನ್ನು ಹಿಂದಿಕ್ಕಬಹುದು ಎಂಬ ಆತಂಕವೂ ಇದಕ್ಕೆ ಕಾರಣವಾಗಿತ್ತು.
ಆದರೆ, ಟ್ರಂಪ್ ಆಡಳಿತವು 2025ರ ಮೇ ತಿಂಗಳಲ್ಲಿ ಈ ನಿಯಮವನ್ನು ರದ್ದುಗೊಳಿಸಿತು. ಇದರಿಂದ Nvidiaಗೆ ಚೀನಾಕ್ಕೆ ಚಿಪ್ ಗಳನ್ನು ಮಾರಾಟ ಮಾಡಲು ಇದ್ದ ನಿರ್ಬಂಧಗಳು ಸಡಿಲಗೊಂಡವು.
ಚೀನಾ Nvidiaಗೆ ಐತಿಹಾಸಿಕವಾಗಿ ಪ್ರಮುಖ ಮಾರುಕಟ್ಟೆಯಾಗಿದೆ. 2010ರಿಂದ 2022ರ ನಡುವೆ ಕಂಪೆನಿಯ ಒಟ್ಟು ಮಾರಾಟದ ಸುಮಾರು ಕಾಲು ಭಾಗದಷ್ಟು ಚೀನಾದಿಂದಲೇ ಬಂದಿತ್ತು. ರಫ್ತು ನಿರ್ಬಂಧ ತೆರವುಗೊಳಿಸುವ ಘೋಷಣೆಯ ಬೆನ್ನಲ್ಲೇ ಕಂಪೆನಿಯ ಷೇರುಗಳ ಮೌಲ್ಯವೂ ಏರಿಕೆಯಾಗಿತ್ತು.
►H200 ಚಿಪ್ ಮಾರಾಟಕ್ಕೂ ಅನುಮತಿ
2025ರ ಡಿಸೆಂಬರ್ನಲ್ಲಿ Nvidiaಯ H200 ಚಿಪ್ ಗಳನ್ನು ಚೀನಾಕ್ಕೆ ಮಾರಾಟ ಮಾಡಲು ಅವಕಾಶ ನೀಡುವುದಾಗಿ ಟ್ರಂಪ್ ಘೋಷಿಸಿದರು. 2026ರ ಜನವರಿಯಲ್ಲಿ ಅಮೆರಿಕದ ವಾಣಿಜ್ಯ ಇಲಾಖೆಯು ಇದಕ್ಕೆ ಅನುಮೋದನೆ ನೀಡಿತು.
Nvidiaಯ ಅತ್ಯಾಧುನಿಕ AI ಚಿಪ್ ಗಳಲ್ಲಿ ಒಂದಾಗಿರುವ H200, ಆ ಸಮಯದಲ್ಲಿ ಚೀನಾದಲ್ಲಿ ಲಭ್ಯವಿದ್ದ ಚಿಪ್ ಗಳಿಗಿಂತ ಸುಮಾರು ಆರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿತ್ತು. ಈ ನಿರ್ಧಾರದಿಂದ ಚೀನಾದ AI ಸಾಮರ್ಥ್ಯ ಹೆಚ್ಚುವ ಆತಂಕ ವ್ಯಕ್ತವಾಗಿತ್ತು.
ವಿದೇಶಾಂಗ ನೀತಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಕುರಿತು ಕಾರ್ಯನಿರ್ವಹಿಸುವ ಅಮೆರಿಕದ ಚಿಂತಕರ ವೇದಿಕೆಯಾದ 'ಕೌನ್ಸಿಲ್ ಆನ್ ಫಾರಿನ್ ರಿಲೇಷನ್ಸ್', ಈ ಮಾರಾಟಕ್ಕೆ ಅನುಮತಿ ನೀಡುವುದರಿಂದ ಚೀನಾದ ಭವಿಷ್ಯದ AI ಅಭಿವೃದ್ಧಿಗೆ ದೊಡ್ಡ ಉತ್ತೇಜನ ಸಿಗಬಹುದು ಮತ್ತು ಅಮೆರಿಕದ ಪ್ರಮುಖ ಪ್ರತಿಸ್ಪರ್ಧಿ ಇನ್ನಷ್ಟು ಬಲಗೊಳ್ಳಬಹುದು ಎಂದು ಎಚ್ಚರಿಸಿತ್ತು.
ಈ ನಿರ್ಧಾರ ಪ್ರಕಟವಾದ ನಂತರದ ದಿನಗಳಲ್ಲಿ ಟ್ರಂಪ್ ಕನಿಷ್ಠ ಮೂರು ಬಾರಿ Nvidia ಷೇರುಗಳನ್ನು ಖರೀದಿಸಿದ್ದಾರೆ. ಪ್ರತಿಯೊಂದು ವಹಿವಾಟಿನ ಮೌಲ್ಯವೂ 2,50,001 ಡಾಲರ್ ನಿಂದ 5,00,000 ಡಾಲರ್ ನಡುವೆ ಇತ್ತು. ಅವರು ಅಧಿಕಾರ ವಹಿಸಿಕೊಂಡ ಬಳಿಕ ಕಂಪೆನಿಯ ಷೇರುಗಳಿಗೆ ಸಂಬಂಧಿಸಿದಂತೆ ಡಝನ್ ಗಟ್ಟಲೆ ವಹಿವಾಟುಗಳನ್ನು ನಡೆಸಿದ್ದಾರೆ ಎಂದು ಹಣಕಾಸು ದಾಖಲೆಗಳು ಸೂಚಿಸುತ್ತವೆ.
Nvidia ಸೇರಿದಂತೆ ಒಟ್ಟಾರೆ AI ಉದ್ಯಮಕ್ಕೆ ಲಾಭವಾಗುವ ಸರಕಾರಿ ನಿರ್ಧಾರಗಳಲ್ಲಿ ಟ್ರಂಪ್ ಅವರ ವೈಯಕ್ತಿಕ ಆರ್ಥಿಕ ಹಿತಾಸಕ್ತಿಗಳು ಪ್ರಭಾವ ಬೀರಿವೆಯೇ ಎಂಬುದನ್ನು DeKleptocracy ಪ್ರಶ್ನಿಸಿದೆ.
AI ಕಂಪೆನಿಯ ಪರವಾಗಿ ಶ್ವೇತಭವನದ ನೀತಿಯ ಮೇಲೆ ಪ್ರಭಾವ ಬೀರಿರಬಹುದು ಎಂದು ಆರೋಪಿಸಲಾದ ಚೀನೀ ಗೂಢಚಾರಿಣಿಯ ಪ್ರಕರಣವನ್ನೂ ಸಂಘಟನೆ ಪ್ರಸ್ತಾಪಿಸಿದೆ. ಅಂತಹ ಆರೋಪಗಳ ಪರಿಶೀಲನೆ ನಡೆಯುತ್ತಿರುವಾಗ ಅಧ್ಯಕ್ಷರ ಸ್ವಂತ ಆರ್ಥಿಕ ಹಿತಾಸಕ್ತಿಗಳ ಬಗ್ಗೆಯೂ ಸಮಾನ ಪರಿಶೀಲನೆ ಅಗತ್ಯ ಎಂದು ಅದು ವಾದಿಸಿದೆ.
"ಒಂದು AI ಕಂಪೆನಿಯ ಪರವಾಗಿ ಚೀನೀ ಗೂಢಚಾರಿಣಿಯೊಬ್ಬರು ಶ್ವೇತಭವನದ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಿರಬಹುದು ಎಂಬ ಆರೋಪದ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಇದೇ ವೇಳೆ, ಟ್ರಂಪ್ ಅವರ ವೈಯಕ್ತಿಕ ಆರ್ಥಿಕ ಹಿತಾಸಕ್ತಿಗಳಿಂದಾಗಿ ಅಮೆರಿಕದ AI ತಂತ್ರಜ್ಞಾನವನ್ನು ಚೀನಾಕ್ಕೆ ವರ್ಗಾಯಿಸಲು ಅವರು ಅವಕಾಶ ಮಾಡಿಕೊಟ್ಟಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಪರಿಶೀಲಿಸಬೇಕಿದೆ" ಎಂದು DeKleptocracy ತನ್ನ ವಿಶ್ಲೇಷಣೆಯಲ್ಲಿ ಹೇಳಿದೆ.






