ಯುದ್ಧ ವಿರೋಧಿ ಹೇಳಿಕೆ ಬಳಿಕ ಪೋಪ್ ಲಿಯೋ ವಿರುದ್ಧ ಟ್ರಂಪ್ ಆಕ್ರೋಶ

ಪೋಪ್ ಲಿಯೋ , ಡೊನಾಲ್ಡ್ ಟ್ರಂಪ್ | Photo Credit : AP , PTI
ವಾಷಿಂಗ್ಟನ್, ಎ.13: ಇರಾನ್ ಮೇಲಿನ ಯುದ್ಧವನ್ನು ತಕ್ಷಣವೇ ಅಂತ್ಯಗೊಳಿಸುವಂತೆ ಕರೆ ನೀಡಿದ ಕ್ಯಾಥೋಲಿಕ್ ಚರ್ಚ್ನ ಮುಖ್ಯಸ್ಥ ಪೋಪ್ ಲಿಯೋ XIV ಅವರ ಹೇಳಿಕೆಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ‘ಟ್ರೂತ್ ಸೋಶಿಯಲ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ದೀರ್ಘ ಪೋಸ್ಟ್ನಲ್ಲಿ ಟ್ರಂಪ್, ಪೋಪ್ ಲಿಯೋ ಅವರನ್ನು “ಅಪರಾಧ ವಿಚಾರದಲ್ಲಿ ದುರ್ಬಲ” ಮತ್ತು “ವಿದೇಶಾಂಗ ನೀತಿಯಲ್ಲಿ ಭಯಾನಕ” ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ ಪೋಪ್ ಲಿಯೋ, ಇರಾನ್ ಮೇಲಿನ ಯುದ್ಧವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದ್ದರು.“ಸರ್ವಶಕ್ತಿಯ ಭ್ರಮೆಯೇ ಇಂತಹ ಸಂಘರ್ಷಗಳಿಗೆ ಕಾರಣ” ಎಂದು ಹೇಳಿದ್ದರು.
ಅವರು ಟ್ರಂಪ್ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅಮೆರಿಕದ ನಾಯಕತ್ವ ಹಾಗೂ ಮಿಲಿಟರಿ ಶಕ್ತಿಯನ್ನು ಧಾರ್ಮಿಕವಾಗಿ ಸಮರ್ಥಿಸುವವರನ್ನು ಗುರಿಯಾಗಿಸಿಕೊಂಡಿದ್ದರು.
ಇದಕ್ಕೆ ಪ್ರತಿಯಾಗಿ ಟ್ರಂಪ್, “ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿರುವುದನ್ನು ಸರಿಯೆಂದು ಭಾವಿಸುವ ಪೋಪ್ ನನಗೆ ಬೇಡ” ಎಂದು ಹೇಳಿದ್ದಾರೆ.
“ಲಿಯೋ ಪೋಪ್ ಆಗಿ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸಬೇಕು. ಸಾಮಾನ್ಯ ಬುದ್ಧಿಯನ್ನು ಬಳಕೆ ಮಾಡಬೇಕು. ಎಡಪಂಥೀಯರನ್ನು ತೃಪ್ತಿಪಡಿಸುವುದನ್ನು ನಿಲ್ಲಿಸಬೇಕು. ರಾಜಕಾರಣಿಯಂತೆ ಅಲ್ಲ, ಉತ್ತಮ ಪೋಪ್ ಆಗಲು ಗಮನಹರಿಸಬೇಕು” ಎಂದು ಅವರು ಕಿಡಿಕಾರಿದ್ದರು.
ಪೋಪ್ ಲಿಯೋ ಅವರ ಆಯ್ಕೆಯಲ್ಲೂ ತಮ್ಮ ಪ್ರಭಾವವಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಕಳೆದ ವರ್ಷ ಆಯ್ಕೆಯಾದ ಮೊದಲ ಅಮೆರಿಕ ಮೂಲದ ಪೋಪ್ ಅವರನ್ನು ಚರ್ಚ್ ಶ್ವೇತಭವನದ ಪರವಾಗಿ ಆಯ್ಕೆ ಮಾಡಿದೆ ಎಂದು ಅವರು ಸೂಚಿಸಿದ್ದಾರೆ.
“ನಾನು ಶ್ವೇತಭವನದಲ್ಲಿ ಇರದಿದ್ದರೆ, ಲಿಯೋ ವ್ಯಾಟಿಕನ್ ನಲ್ಲಿ ಇರುತ್ತಿರಲಿಲ್ಲ” ಎಂದು ಟ್ರಂಪ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.






