United States| ಗಾಂಜಾ ಮೇಲಿನ ನಿರ್ಬಂಧ ಸಡಿಲಗೊಳಿದ ಡೊನಾಲ್ಡ್ ಟ್ರಂಪ್

Photo| PTI
ವಾಷಿಂಗ್ಟನ್: ಗಾಂಜಾವನ್ನು ಕಡಿಮೆ ಅಪಾಯಕಾರಿ ಎಂದು ಮರು ವರ್ಗೀಕರಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಅಂಕಿತ ಹಾಕಿದ್ದು, ಗಾಂಜಾ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಿದ್ದಾರೆ.
Al Jazeera ವರದಿ ಪ್ರಕಾರ, ಈ ಆದೇಶದಡಿ ಅಟಾರ್ನಿ ಜನರಲ್ ಪ್ಯಾಮ್ ಬಾಂಡಿ ಅವರು ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ (DEA) ಅಡಿಯಲ್ಲಿ ಗಾಂಜಾವನ್ನು ಮರುವರ್ಗೀಕರಣ ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕಿದೆ.
ಅಮೆರಿಕದಲ್ಲಿ ಔಷಧಗಳು ಮತ್ತು ಇತರ ರಾಸಾಯನಿಕಗಳನ್ನು ಐದು ಹಂತದ ವರ್ಗೀಕರಣ ವ್ಯವಸ್ಥೆಯಾಗಿ ವಿಂಗಡಿಸಲಾಗಿದೆ. ಶೆಡ್ಯೂಲ್ I ಹೆಚ್ಚು ನಿರ್ಬಂಧಿತ ಮತ್ತು ಶೆಡ್ಯೂಲ್ V ಕಡಿಮೆ ನಿರ್ಬಂಧಿತವಾಗಿರುವುದನ್ನು ಸೂಚಿಸುತ್ತದೆ.
ಗಾಂಜಾ ಈ ಹಿಂದೆ ಶೆಡ್ಯೂಲ್ I ರ ವರ್ಗದಲ್ಲಿತ್ತು, ಅದನ್ನು ಹೆರಾಯಿನ್ ಮತ್ತು ಎಲ್ಎಸ್ಡಿಯಂತಹ ಪ್ರಬಲ ಮಾದಕ ದ್ರವ್ಯಗಳ ಜೊತೆಗೆ ವರ್ಗೀಕರಿಸಲಾಗಿತ್ತು. ಗುರುವಾರದ ಆದೇಶದಿಂದ ಕಡಿಮೆ ಅಪಾಯಕಾರಿಯಾಗಿರುವ ಕೆಟಮೈನ್ ಮತ್ತು ಅನಾಬೊಲಿಕ್ ಸ್ಟೀರಾಯ್ಡ್ಗಳಿರುವ ವರ್ಗದಲ್ಲಿ ಅಂದರೆ ಶೆಡ್ಯೂಲ್ IIIಕ್ಕೆ ಇಳಿಸಲಾಗಿದೆ.
ಈ ಬದಲಾವಣೆಯು ಗಾಂಜಾವನ್ನು ಕಾನೂನುಬದ್ಧಗೊಳಿಸುವುದಲ್ಲ. ಆದರೆ ಯಾವುದೇ ರೀತಿಯಲ್ಲಿ ಔಷಧವಾಗಿ ಅದರ ಬಳಕೆಯನ್ನು ನಿರ್ಬಂಧಿಸುವುದಿಲ್ಲ ಎಂದು ಟ್ರಂಪ್ ಹೇಳಿದರು. ಈ ನಿಯಮ ಸಡಿಲಿಕೆ ಸಂಶೋಧನೆಗೆ ಸಹಕಾರಿಯಾಗಲಿದೆ ಎಂದು ವರದಿಯಾಗಿದೆ.







