H-1ಬಿ ವೀಸಾದ 60 ದಿನಗಳ ‘ಗ್ರೇಸ್ ಪಿರಿಯಡ್’ ರದ್ದುಗೊಳಿಸಲು ಟ್ರಂಪ್ ಆಡಳಿತ ಪ್ರಸ್ತಾವನೆ; ಭಾರತೀಯ ಉದ್ಯೋಗಿಗಳಿಗೆ ಸಂಕಷ್ಟದ ಸಾಧ್ಯತೆ

ಡೊನಾಲ್ಡ್ ಟ್ರಂಪ್ | Photo Credit : PTI
ನ್ಯೂಯಾರ್ಕ್: ಉದ್ಯೋಗ ಕಳೆದುಕೊಂಡ ಬಳಿಕ ಅಮೆರಿಕದಲ್ಲೇ ಉಳಿದುಕೊಂಡು ಹೊಸ ಉದ್ಯೋಗದಾತರನ್ನು ಹುಡುಕಿಕೊಳ್ಳಲು ಎಚ್-1ಬಿ ವೀಸಾ ಹೊಂದಿರುವ ನುರಿತ ವೃತ್ತಿಪರರು ಸೇರಿದಂತೆ ವಿದೇಶಿ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ 60 ದಿನಗಳ ಹೆಚ್ಚುವರಿ ರಿಯಾಯಿತಿ ಅವಧಿಯನ್ನು ರದ್ದುಗೊಳಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಮುಂದಾಗಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಮೆರಿಕದ ತಂತ್ರಜ್ಞಾನ ಮತ್ತು ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಚ್-1ಬಿ ವೀಸಾ ಹೊಂದಿರುವವರಲ್ಲಿ ಸಿಂಹಪಾಲು ಭಾರತೀಯ ಐಟಿ ವೃತ್ತಿಪರರಾಗಿರುವುದರಿಂದ, ಈ ಪ್ರಸ್ತಾವನೆಯು ಅವರಿಗೆ ತೀವ್ರ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಯುಎಸ್ ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ (DHS) ಗುರುವಾರ ಫೆಡರಲ್ ರಿಜಿಸ್ಟರ್ನಲ್ಲಿ ಪ್ರಕಟಿಸಿದ ಪ್ರಸ್ತಾವನೆಯ ಪ್ರಕಾರ, ಎಚ್-1ಬಿ ಹಾಗೂ ಇತರ ಕೆಲವು ತಾತ್ಕಾಲಿಕ ಕೆಲಸದ ವೀಸಾ ಹೊಂದಿರುವ ಉದ್ಯೋಗಿಗಳು ತಮ್ಮ ಉದ್ಯೋಗ ಕೊನೆಗೊಂಡ ತಕ್ಷಣವೇ ಅಮೆರಿಕ ತೊರೆಯಬೇಕಾಗುತ್ತದೆ. ಹೊಸ ಉದ್ಯೋಗ ಹುಡುಕಲು ಅಥವಾ ದೇಶ ತೊರೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಈ ಹಿಂದೆ ನೀಡಲಾಗುತ್ತಿದ್ದ ಗರಿಷ್ಠ 60 ದಿನಗಳ ಕಾಲಾವಕಾಶ ಇನ್ನು ಮುಂದೆ ಸಿಗುವುದಿಲ್ಲ.
ಈ 60 ದಿನಗಳ ಗ್ರೇಸ್ ಪಿರಿಯಡ್ ನಿಯಮ 2017ರಿಂದ ಜಾರಿಯಲ್ಲಿದೆ. ಇದು ವಿದೇಶಿ ಉದ್ಯೋಗಿಗಳಿಗೆ ತಮ್ಮನ್ನು ಪ್ರಾಯೋಜಿಸಲು ಸಿದ್ಧವಿರುವ ಮತ್ತೊಬ್ಬ ಅಮೆರಿಕದ ಉದ್ಯೋಗದಾತರನ್ನು ಹುಡುಕಲು ಅವಕಾಶ ಕಲ್ಪಿಸುತ್ತದೆ. ಜೊತೆಗೆ ಉದ್ಯೋಗ ದೊರೆಯದಿದ್ದರೆ ಮನೆ ಖಾಲಿ ಮಾಡಲು ಮತ್ತು ಮಕ್ಕಳ ಶಾಲಾ ಶಿಕ್ಷಣ ಸೇರಿದಂತೆ ಅಗತ್ಯ ಪ್ರಾಯೋಗಿಕ ವ್ಯವಸ್ಥೆಗಳನ್ನು ಪೂರ್ಣಗೊಳಿಸಿಕೊಂಡು ತವರಿಗೆ ಮರಳಲು ಅವಕಾಶ ಕಲ್ಪಿಸುತ್ತಿತ್ತು.
ಅಮೆರಿಕದ ತಂತ್ರಜ್ಞಾನ ಉದ್ಯಮವು ಭಾರತ ಮತ್ತು ಚೀನಾದ ನುರಿತ ಉದ್ಯೋಗಿಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಈ ವಲಯಕ್ಕೆ ಎಚ್-1ಬಿ ವೀಸಾಗಳು ಅತ್ಯಂತ ಪ್ರಮುಖವಾಗಿವೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ಇನ್ಫೋಸಿಸ್, ಎಚ್ಸಿಎಲ್ಟೆಕ್ (HCLTech) ಮತ್ತು ಎಲ್ಟಿಐಮೈಂಡ್ಟ್ರೀ (LTIMindtree) ಸೇರಿದಂತೆ ಪ್ರಮುಖ ಭಾರತೀಯ ಐಟಿ ಕಂಪೆನಿಗಳು ಎಚ್-1ಬಿ ವೀಸಾಗಳ ಪ್ರಮುಖ ಪ್ರಾಯೋಜಕರಾಗಿವೆ. ಡೆಲಾಯ್ಟ್, ಪಿಡಬ್ಲ್ಯುಸಿಯಂತಹ ಪ್ರಮುಖ ಜಾಗತಿಕ ಕನ್ಸಲ್ಟೆನ್ಸಿ ಸಂಸ್ಥೆಗಳೂ ಎಚ್-1ಬಿ ವೀಸಾ ಪ್ರಾಯೋಜಕರಾಗಿವೆ.
ವಿದೇಶಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವಾಗ ಹಾಗೂ ಅವರ ನಿರ್ಗಮನ ಪ್ರಕ್ರಿಯೆ ನಿರ್ವಹಿಸುವಾಗ ಮಾನವ ಸಂಪನ್ಮೂಲ ತಂಡಗಳಿಗೆ ಸಿಗುತ್ತಿದ್ದ ಸಮಯದ ಮಿತಿಯನ್ನೂ ಈ ನಿಯಮ ಗಮನಾರ್ಹವಾಗಿ ಸಂಕುಚಿತಗೊಳಿಸಲಿದೆ ಎಂದು ಬೆರಾರ್ಡಿ ಇಮಿಗ್ರೇಷನ್ ಲಾ ಸಂಸ್ಥೆಯ ವಕೀಲರು ಅಭಿಪ್ರಾಯಪಟ್ಟಿದ್ದಾರೆ.






