ಇರಾನ್ ಶಾಂತಿ ಒಪ್ಪಂದದ ಬಗ್ಗೆ ಅಮೆರಿಕ–ಇಸ್ರೇಲ್ ನಡುವೆ ಭಿನ್ನಾಭಿಪ್ರಾಯ: ವ್ಯಾನ್ಸ್ ಹೇಳಿಕೆಗೆ ಬೆನ್ಗ್ವಿರ್ ತಿರುಗೇಟು

ಜೆ.ಡಿ. ವ್ಯಾನ್ಸ್ |ಇತಮಾರ್ ಬೆನ್ಗ್ವಿರ್ |Photo Credit: aljazeera - wikipedia
ವಾಷಿಂಗ್ಟನ್/ಜೆರುಸಲೇಂ: ಇರಾನ್ ನೊಂದಿಗೆ ಅಮೆರಿಕ ಮಾಡಿರುವ ಹೊಸ ಶಾಂತಿ ಪ್ರಯತ್ನದ ಕುರಿತು ಅಮೆರಿಕ ಮತ್ತು ಇಸ್ರೇಲ್ ನಡುವಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿವೆ. ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹಾಗೂ ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇತಮಾರ್ ಬೆನ್ಗ್ವಿರ್ ನಡುವಿನ ವಾಕ್ಸಮರ ಈ ಬೆಳವಣಿಗೆಗೆ ಸಾಕ್ಷಿಯಾಗಿದೆ.
‘ಇಸ್ರೇಲ್ ತನ್ನ ಭದ್ರತಾ ಸಮಸ್ಯೆಗಳನ್ನು ಕೇವಲ ಬಲಪ್ರಯೋಗದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ವ್ಯಾನ್ಸ್ ಹೇಳಿದ್ದರು. ಈ ಹೇಳಿಕೆಯನ್ನು ಇಸ್ರೇಲ್ ನ ಬಲಪಂಥೀಯ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬೆನ್ಗ್ವಿರ್, ‘21ನೇ ಶತಮಾನದ ನಾಝಿಗಳಂತೆ ಇರಾನ್ ಮತ್ತು ಅದರ ಬೆಂಬಲಿತ ಗುಂಪುಗಳನ್ನು ಎದುರಿಸಬೇಕು’ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದು ವ್ಯಾನ್ಸ್ ಅವರ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇರಾನ್ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳೇ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದೇ ವೇಳೆ, ಇರಾನ್ ಯುದ್ಧದ ಬಳಿಕ ಅಮೆರಿಕ ಇಸ್ರೇಲ್ ನಲ್ಲಿರುವ ತನ್ನ ಮಿಲಿಟರಿ ಉಪಸ್ಥಿತಿಯನ್ನು ಭಾಗಶಃ ಕಡಿಮೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಬೆನ್ಗುರಿಯನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯೋಜನೆಯಲ್ಲಿರುವ ಸುಮಾರು 72 ಅಮೆರಿಕದ ಮಿಲಿಟರಿ ವಿಮಾನಗಳಲ್ಲಿ ಶೇಕಡಾ 20ರಷ್ಟು ವಿಮಾನಗಳನ್ನು ಸ್ಥಳಾಂತರಿಸಲು ಯೋಜಿಸಲಾಗಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ನೊಂದಿಗೆ ಮಾಡಿಕೊಂಡಿರುವ ಮಧ್ಯಂತರ ಒಪ್ಪಂದವು ಅಮೆರಿಕದ ರಿಪಬ್ಲಿಕನ್ ಪಕ್ಷದೊಳಗೂ ಅಸಮಾಧಾನಕ್ಕೆ ಕಾರಣವಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು 110 ದಿನಗಳ ಸಂಘರ್ಷಕ್ಕೆ ಅಂತ್ಯ ಹಾಡುವ ಉದ್ದೇಶದ 14 ಅಂಶಗಳ ತಿಳುವಳಿಕೆ ಒಪ್ಪಂದವನ್ನು ರಾಜತಾಂತ್ರಿಕ ಸಾಧನೆ ಎಂದು ಬಣ್ಣಿಸಿದೆ.
ಆದರೆ ರಿಪಬ್ಲಿಕನ್ ಸೆನೆಟರ್ ಗಳಾದ ಬಿಲ್ ಕ್ಯಾಸಿಡಿ ಮತ್ತು ಟೆಡ್ ಕ್ರೂಝ್ ಸೇರಿದಂತೆ ಹಲವು ನಾಯಕರು ಒಪ್ಪಂದವನ್ನು ಟೀಕಿಸಿದ್ದಾರೆ. ಒಪ್ಪಂದವು ಇರಾನ್ ನ ಪರಮಾಣು ಕಾರ್ಯಕ್ರಮವನ್ನು ಸಮರ್ಪಕವಾಗಿ ನಿಯಂತ್ರಿಸುವುದಿಲ್ಲ ಹಾಗೂ ಹಾರ್ಮುಝ್ ಜಲಸಂಧಿಯ ಕುರಿತ ಬೆದರಿಕೆ ತಂತ್ರಕ್ಕೆ ಉತ್ತೇಜನ ನೀಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಆಡಳಿತವು ಒಪ್ಪಂದವನ್ನು ಸಮರ್ಥಿಸಿಕೊಂಡಿದ್ದು, ಹೆಚ್ಚಿನ ಮಟ್ಟದಲ್ಲಿ ಪುಷ್ಟೀಕರಿಸಲಾದ ಯುರೇನಿಯಂನ ಒಂದು ಭಾಗವನ್ನು ಕಡಿಮೆ ಮಟ್ಟದ ರೂಪಕ್ಕೆ ಪರಿವರ್ತಿಸುವ ವ್ಯವಸ್ಥೆ ಇದರಲ್ಲಿ ಅಳವಡಿಸಲಾಗಿದೆ ಎಂದು ಹೇಳಿದೆ. ಇದರಿಂದ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಯ ಅಪಾಯ ಕಡಿಮೆಯಾಗಲಿದೆ ಎಂದು ಆಡಳಿತ ವಾದಿಸಿದೆ.
ಆದರೆ ವಿಮರ್ಶಕರ ಪ್ರಕಾರ, ಈ ಒಪ್ಪಂದವು 2015ರ ಇರಾನ್ ಪರಮಾಣು ಒಪ್ಪಂದಕ್ಕಿಂತ ದುರ್ಬಲವಾಗಿದೆ. ದೀರ್ಘಾವಧಿಯ ನಿರ್ಬಂಧಗಳು ಮತ್ತು ಕಠಿಣ ಪರಿಶೀಲನಾ ವ್ಯವಸ್ಥೆಗಳು ಹೊಸ ಒಪ್ಪಂದದಲ್ಲಿ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ಇರಾನ್ ಕುರಿತ ಹೊಸ ರಾಜತಾಂತ್ರಿಕ ಪ್ರಯತ್ನ, ಅಮೆರಿಕ–ಇಸ್ರೇಲ್ ನಡುವಿನ ಭಿನ್ನಾಭಿಪ್ರಾಯ ಹಾಗೂ ಅಮೆರಿಕದ ಆಂತರಿಕ ರಾಜಕೀಯ ವಿರೋಧದ ನಡುವೆ ಮುಂದಿನ 60 ದಿನಗಳ ಮಾತುಕತೆ ಅವಧಿಯು ಮಹತ್ವ ಪಡೆದುಕೊಂಡಿದೆ.






